Home ಕೃಷಿಮಳೆಯ ನೀರು ಉಳಿಸಿ ಭೂಮಿಯ ತೇವಾಂಶ ಕಾಪಾಡುವ “ಚೌಕ ಮಡಿ” ಪದ್ಧತಿ

ಮಳೆಯ ನೀರು ಉಳಿಸಿ ಭೂಮಿಯ ತೇವಾಂಶ ಕಾಪಾಡುವ “ಚೌಕ ಮಡಿ” ಪದ್ಧತಿ

ಸಾವಯವ ಕೃಷಿಕ ವೀರೇಶ ನೇಗಲಿ ಅವರ ವಿನೂತನ ಕೃಷಿ ಕ್ರಮಕ್ಕೆ ಮೆಚ್ಚುಗೆ

by Editor
0 comments

ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.19:

ಸಮೀಪದ ಕೋಟುಮುಚಗಿ ಗ್ರಾಮದ ಸಾವಯವ ಕೃಷಿಕ ವೀರೇಶ ನೇಗಲಿ ಅವರು ತಮ್ಮ ಹೊಲದಲ್ಲಿ ಅಳವಡಿಸಿಕೊಂಡಿರುವ “ಚೌಕ ಮಡಿ” ಪದ್ಧತಿ ಇದೀಗ ರೈತರ ಗಮನ ಸೆಳೆಯುತ್ತಿದೆ. ಬೇಸಿಗೆಯಲ್ಲಿ ಅಕಾಲಿಕವಾಗಿ ಸುರಿಯುವ ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗದೆ, ಹೊಲದಲ್ಲೇ ನಿಂತು ಭೂಮಿಯಲ್ಲಿ ಇಂಗುತ್ತಿರುವ ಅಪರೂಪದ ದೃಶ್ಯ ರೈತರಲ್ಲಿ ಕುತೂಹಲ ಮೂಡಿಸಿದೆ.


ಹಿರಿಯ ರೈತರ ಪ್ರಕಾರ, “ಹರಿಯುವ ನೀರನ್ನು ನಿಲ್ಲಿಸುವುದು, ನಿಂತ ನೀರನ್ನು ಇಂಗಿಸುವುದು ಹಾಗೂ ಇಂಗಿದ ನೀರಿನ ತೇವಾಂಶವನ್ನು ಮಣ್ಣಿನಲ್ಲಿ ಉಳಿಸಿಕೊಳ್ಳುವುದು” ಎನ್ನುವ ಉದ್ದೇಶದಿಂದ ಅನುಸರಿಸುವ ಕೃಷಿ ವಿಧಾನವೇ “ಚೌಕ ಮಡಿ” ಪದ್ಧತಿ. ಈ ವಿಧಾನವು ನೀರಿನ ಸಂರಕ್ಷಣೆ ಹಾಗೂ ಭೂಮಿಯ ತೇವಾಂಶ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಸಾವಯವ ಕೃಷಿಕ ವೀರೇಶ ನೇಗಲಿ ಅವರು ಹಿಂಗಾರಿ ಕಟಾವಿನ ನಂತರ ಹೊಲವನ್ನು ಕುಂಟೆಯಿಂದ ಉಳುಮೆ ಮಾಡಿ, ನಂತರ ಚೌಕ ಮಡಿಗಳನ್ನು ನಿರ್ಮಿಸಿದ್ದಾರೆ. ಇದರಿಂದ ಮಳೆಯ ನೀರು ವೇಗವಾಗಿ ಹರಿದು ಹೋಗದೆ ಹೊಲದಲ್ಲೇ ನಿಂತು ನಿಧಾನವಾಗಿ ಭೂಮಿಯಲ್ಲಿ ಇಂಗುತ್ತಿದೆ. ಪರಿಣಾಮವಾಗಿ ಮಣ್ಣಿನಲ್ಲಿ ತೇವಾಂಶ ದೀರ್ಘಕಾಲ ಉಳಿದು, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.


ಒಂದು ವೇಳೆ ಬಿತ್ತನೆ ಮಾಡಿದ ಬಳಿಕ ಮಳೆಯು ಕೈಕೊಟ್ಟರೂ, ಭೂಮಿಯಲ್ಲಿ ಉಳಿದಿರುವ ತೇವಾಂಶ ಬೆಳೆಗಳನ್ನು ಒಣಗದಂತೆ ರಕ್ಷಿಸುತ್ತದೆ. ಇದರಿಂದ ಬೆಳೆ ಇಳುವರಿಯ ಮೇಲೂ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ ಎಂದು ಕೃಷಿಕರು ಅಭಿಪ್ರಾಯಪಟ್ಟಿದ್ದಾರೆ.


ಇತ್ತೀಚಿನ ಅನಿಶ್ಚಿತ ಹವಾಮಾನ ಪರಿಸ್ಥಿತಿಯಲ್ಲಿ “ಚೌಕ ಮಡಿ” ಪದ್ಧತಿ ರೈತರಿಗೆ ಉತ್ತಮ ಪರ್ಯಾಯ ಕೃಷಿ ಕ್ರಮವಾಗಿದ್ದು, ಎಲ್ಲಾ ರೈತ ಬಾಂಧವರು ತಮ್ಮ ಹೊಲಗಳ ಸುತ್ತ ಬದುವು ನಿರ್ಮಿಸಿ ಈ ವಿಧಾನ ಅಳವಡಿಸಿಕೊಳ್ಳಬೇಕು ಎಂದು ಸಾವಯವ ಕೃಷಿಕ ವೀರೇಶ ನೇಗಲಿ ಮನವಿ ಮಾಡಿದ್ದಾರೆ.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು