Home ವೆಬ್ ಸ್ಟೋರೀಸ್ಜನರ ನಾಡಿಮಿಡಿತ ಅರಿತ ಹಸನ್ಮುಖಿ ಪವರ್ ಮ್ಯಾನ್: ಮಹೇಶ್ ಹಡಪದ ಸೇವೆಯ ಕಥೆ

ಜನರ ನಾಡಿಮಿಡಿತ ಅರಿತ ಹಸನ್ಮುಖಿ ಪವರ್ ಮ್ಯಾನ್: ಮಹೇಶ್ ಹಡಪದ ಸೇವೆಯ ಕಥೆ

by Editor
0 comments

ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.19:

ವಿಶೇಷ ವರದಿ: ಸಂತೋಷ ಯಳಮಲಿ , ನರೇಗಲ್ಲ:

ಇಂದಿನ ಯುಗದಲ್ಲಿ ಕೆಲಸ ಮಾಡುವುದು ಒಂದು ಭಾಗವಾದರೆ, ಅದನ್ನು ಮನಸ್ಸಿಟ್ಟು ಜನರ ವಿಶ್ವಾಸ ಗೆಲ್ಲುವುದು ಮತ್ತೊಂದು ದೊಡ್ಡ ಸಾಧನೆ. ಅಂತಹ ಸಾಧಕರಲ್ಲಿ ನರೇಗಲ್ಲ ಹೆಸ್ಕಾಂ ವಿಭಾಗದ ಪವರ್ ಮ್ಯಾನ್ ಮಹೇಶ್ ಶಂಕ್ರಪ್ಪ ಹಡಪದ ಅವರು ಪ್ರಮುಖರು.


ಕಳೆದ ಆರು ವರ್ಷಗಳಿಂದ ಜಕ್ಕಲಿ ಕ್ಯಾಂಪಿನಲ್ಲಿ ಸೇವೆ ಸಲ್ಲಿಸುತ್ತಿರುವ ಮಹೇಶ್ ಅವರು, ಗಾಳಿ–ಮಳೆ–ಚಳಿ ಯಾವುದನ್ನೂ ಲೆಕ್ಕಿಸದೆ ಹಗಲಿರುಳು ತಮ್ಮ ಕರ್ತವ್ಯಕ್ಕೆ ಬದ್ಧರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜನರು ಯಾವ ಸಮಯದಲ್ಲಿ ಕರೆ ಮಾಡಿದರೂ, ತಕ್ಷಣ ಸ್ಪಂದಿಸಿ ಶಾಂತಸ್ವಭಾವದಿಂದ ಮಾತನಾಡಿ, ಸಮಸ್ಯೆಗೆ ಪರಿಹಾರ ಕೊಡಿಸುವುದು ಇವರ ವೈಶಿಷ್ಟ್ಯ.
ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ಉಂಟಾದಾಗ, ಕೇವಲ ದುರಸ್ತಿ ಮಾಡುವುದಲ್ಲದೆ, ವಾಟ್ಸಪ್ ಮೂಲಕ ಫೋಟೋ ಹಾಗೂ ಮಾಹಿತಿ ಹಂಚಿಕೊಂಡು ಜನರಲ್ಲಿ ಸ್ಪಷ್ಟತೆ ಮೂಡಿಸುತ್ತಾರೆ. ಈ ರೀತಿಯ ಪಾರದರ್ಶಕತೆ ಇವರಿಗೆ ಜನರ ಮೆಚ್ಚುಗೆ ತಂದಿದೆ.
ಯಾರು ಏನು ಬೈದರೂ ಮನಸ್ಸಿಗೆ ತೆಗೆದುಕೊಳ್ಳದೆ, ಸದಾ ಹಸನ್ಮುಖಿಯಾಗಿ ಸೇವೆ ಸಲ್ಲಿಸುವ ಮಹೇಶ್ ಅವರು, ನಿಜಕ್ಕೂ “ಶಿಸ್ತಿನ ಸಿಪಾಯಿ” ಎಂದೇ ಗುರುತಿಸಿಕೊಂಡಿದ್ದಾರೆ. ಮನೆಮನೆಗಳಲ್ಲಿ ಉಂಟಾಗುವ ಸಣ್ಣ–ದೊಡ್ಡ ವಿದ್ಯುತ್ ಸಮಸ್ಯೆಗಳನ್ನು ಸಹನೆ ಮತ್ತು ಶಾಂತಿಯಿಂದ ಬಗೆಹರಿಸುವುದು ಇವರ ನಿತ್ಯದ ಸೇವೆಯ ಭಾಗವಾಗಿದೆ.


ಮಹೇಶ್ ಹಡಪದ ಅವರು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬೆನಕಲ್ ಗ್ರಾಮದವರು. 2014ರಲ್ಲಿ ಹೆಸ್ಕಾಂನಲ್ಲಿ ನೇರ ನೇಮಕಾತಿ ಪಡೆದು ಹೊಳೆ ಆಲೂರ ಶಾಖೆಯಲ್ಲಿ ಸೇವೆ ಆರಂಭಿಸಿದರು. ಐದು ವರ್ಷಗಳ ಸೇವೆಯ ಬಳಿಕ ಪದೋನ್ನತಿ ಪಡೆದು ನರೇಗಲ್ಲ ಶಾಖೆಗೆ ವರ್ಗಾವಣೆಗೊಂಡು, ಜಕ್ಕಲಿ ಕ್ಯಾಂಪಿನಲ್ಲಿ ತಮ್ಮ ಕಾರ್ಯಚಟುವಟಿಕೆ ಮುಂದುವರೆಸುತ್ತಿದ್ದಾರೆ.
ಸೇವೆಯ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ಮಹೇಶ್ ಅವರು ತಮ್ಮ ಪ್ರತಿಭೆ ತೋರಿದ್ದಾರೆ. “ರಾಮರಾಜ್ಯದಲ್ಲಿ ಕರ್ಮಕಾಂಡ ಅರ್ಥಾತ್ ಆರಿ ಹೋಯಿತು ನಂದಾದೀಪ)” ಎಂಬ ಹೃದಯಸ್ಪರ್ಶಿ ಸಾಮಾಜಿಕ ನಾಟಕವನ್ನು ರಚಿಸಿ, ತಮ್ಮ ಊರಿನಲ್ಲಿ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.


ಇವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, 2023-24ನೇ ಸಾಲಿನಲ್ಲಿ ಗದಗದ ಗಜಾನನೋತ್ಸವ ಸಮಿತಿಯಿಂದ “ಉತ್ತಮ ಮಾರ್ಗದಾಳು” ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ.
ಇತ್ತೀಚೆಗೆ ಜಕ್ಕಲಿ ಗ್ರಾಮದಲ್ಲಿ ಬಿರುಗಾಳಿ ಮಳೆಯಿಂದ 22 ವಿದ್ಯುತ್ ಕಂಬಗಳು ಧರೆಗೆ ಉರುಳಿದ ಸಂದರ್ಭದಲ್ಲೂ, ತಕ್ಷಣ ಮೇಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೊಂಡು, ಕಡಿಮೆ ಸಮಯದಲ್ಲಿ ವಿದ್ಯುತ್ ಸಂಪರ್ಕ ಪುನಃಸ್ಥಾಪನೆ ಮಾಡಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಇಂತಹ ನಿಸ್ವಾರ್ಥ ಸೇವಕರು ಸಮಾಜಕ್ಕೆ ನಿಜವಾದ ಶಕ್ತಿ. ಮಹೇಶ್ ಹಡಪದ ಅವರ ಸೇವೆ ಮುಖಸ್ತುತಿ ಅಲ್ಲ—ಜನಮನ ಗೆದ್ದ ನೈಜ ಸಾಧನೆ. ಇಂಥ ಪವರ್ ಮ್ಯಾನ್‌ಗಳು ನಮ್ಮ ನಡುವೆ ಇದ್ದಾರೆ ಎನ್ನುವುದು ಹೆಮ್ಮೆಯ ವಿಷಯ.

ಬೈಟ್
“ಸೇವೆ ಅಂದ್ರೆ ಕೇವಲ ಕೆಲಸ ಮಾಡೋದಲ್ಲ…
ಜನರ ಕಷ್ಟಕ್ಕೆ ಸಮಯಕ್ಕೆ ಸ್ಪಂದಿಸಿ, ಅವರ ಮುಖದಲ್ಲಿ ನಗು ತರೋದು.
ಗಾಳಿ–ಮಳೆ–ಕತ್ತಲೆ ನಡುವೆಯೂ ಜನರ ಮನೆ ಬೆಳಗಿಸಲು ಶ್ರಮಿಸುತ್ತಿರುವ ಮಹೇಶ್ ಹಡಪದ ಅವರಂತಹ ಸಿಬ್ಬಂದಿಯೇ ಇಲಾಖೆಯ ನಿಜವಾದ ಶಕ್ತಿ.
ಕರ್ತವ್ಯಕ್ಕೆ ಪ್ರಾಮಾಣಿಕತೆ ಮತ್ತು ಜನರೊಂದಿಗೆ ಮಾನವೀಯತೆ ಇದ್ದರೆ, ಸಾಮಾನ್ಯ ಉದ್ಯೋಗಿಯೂ ಜನಮನದ ಹೀರೋ ಆಗಬಹುದು.”
ಸಂಗಮೇಶ ಮೆಣಸಗಿ. ಜಕ್ಕಲಿ

ಬೈಟ್

“ಜನರ ಮನೆಗೆ ಬೆಳಕು ತಲುಪಿಸುವುದು ನನ್ನ ಕರ್ತವ್ಯ ಮಾತ್ರವಲ್ಲ, ಅದು ನನ್ನ ಹೊಣೆಗಾರಿಕೆಯೂ ಹೌದು. ಮಳೆ-ಗಾಳಿ ಎಷ್ಟೇ ಬಂದರೂ ಜನರು ಕತ್ತಲಲ್ಲಿ ಇರಬಾರದು ಅನ್ನೋದು ನನ್ನ ಮೊದಲ ಆದ್ಯತೆ. ಗ್ರಾಮಸ್ಥರ ಪ್ರೀತಿ ಮತ್ತು ವಿಶ್ವಾಸವೇ ನನಗೆ ಇನ್ನಷ್ಟು ಜವಾಬ್ದಾರಿಯಿಂದ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಇಲಾಖೆಯ ಸಹೋದ್ಯೋಗಿಗಳ ಸಹಕಾರ ಮತ್ತು ಹಿರಿಯರ ಮಾರ್ಗದರ್ಶನದಿಂದಲೇ ಈ ಸೇವೆ ಸಾಧ್ಯವಾಗಿದೆ.”
ಮಹೇಶ್ ಹಡಪದ ನರೇಗಲ್ಲ ಹೆಸ್ಕಾಂ ವಿಭಾಗದ ಸೇವೆ

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು