289
ಚೈತನ್ಯ ನ್ಯೂಸ್ 24 ಲಕ್ಷ್ಮೇಶ್ವರ ಮೇ. 08:
ಸಿರಿತನ ಬಂದಾಗ ಹಿಗ್ಗದೇ ಬಡತನ ಬಂದಾಗ ಕುಗ್ಗದೇ ಕ್ರಿಯಾಶೀಲನಾಗಿ ಬಾಳುವುದೇ ಜೀವನದ ಗುರಿಯಾಗಬೇಕಾಗಿದೆ. ಹೊರಗಿನ ಶ್ರೀಮಂತಿಕೆ ಹೆಚ್ಚಿಸಿಕೊಳ್ಳುವುದರ ಜೊತೆಗೆ ಒಳಗಿರುವ ಆಧ್ಯಾತ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಆಧ್ಯಾತ್ಮ ಸಂಪತ್ತಿನಿ0ದ ಜೀವನದಲ್ಲಿ ಸುಖ ಶಾಂತಿ ಪ್ರಾಪ್ತವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಗುರುವಾರ ಹಾಲೇವಾಡಿಮಠದ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ರಜತ ಮಹೋತ್ಸವ-ಜಯಂತ್ಯುತ್ಸವ ಹಾಗೂ ಮಾತಾ ಪಿತೃಗಳ ಪುಣ್ಯ ಸ್ಮರಣೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಸತ್ಯ ಶುದ್ಧವಾದ ಜೀವನಕ್ಕೆ ಆದರ್ಶ ಮೌಲ್ಯಗಳ ಪರಿಪಾಲನೆಯ ಅಗತ್ಯವಿದೆ. ಧರ್ಮದ ವೃಕ್ಷ ಬರಿ ವೃಕ್ಷವಲ್ಲ. ಅದೊಂದು ಅದ್ಭುತ ಅಶ್ವತ್ಥ ವೃಕ್ಷ. ಸಮೃದ್ಧಿ ಶಾಂತಿಯ ತಂಗಾಳಿ ನೀಡುವ ಹೆಮ್ಮರ. ಆಚಾರ್ಯರು ಋಷಿ ಮುನಿಗಳು ಸಾಧು ಸಂತ ಮಹಾಂತರು ಜ್ಞಾನ ಸುಧೆಯನ್ನು ಹಂಚುವುದರ ಮೂಲಕ ಇತರರ ಬಾಳು ಬೆಳಗಿಸುತ್ತಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಯುಗಪುರುಷರಾಗಿ ಜಾತಿ ಮತ ಪಂಥಗಳೆನ್ನದೇ ಸಕಲರ ಏಳಿಗೆಗೆ ಶ್ರಮಿಸಿದ್ದಾರೆ. ಅವರು ಕೊಟ್ಟ ಸಂದೇಶ ತೋರಿದ ದಾರಿ ನಮ್ಮೆಲ್ಲರ ಬಾಳಿಗೆ ಬೆಳಕು ತೋರಿವೆ. ಹಾಲೇವಾಡಿಮಠ ಸಹೋದರರು ಸುಂದರ ಮಂದಿರ ನಿರ್ಮಿಸಿ ೨೫ ವರುಷ ತುಂಬಿದ ಸಂದರ್ಭದಲ್ಲಿ ರಜತ ಮಹೋತ್ಸವ ಆಚರಿಸುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಆನಂದ ಮೆಕ್ಕಿ ಮಾತನಾಡಿ ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ. ಅದರೊಂದಿಗೆ ಧರ್ಮ ಶ್ರದ್ಧೆ ಮತ್ತು ಸದಾಚಾರ ಬೆಳೆದು ಬರಬೇಕಾಗಿದೆ. ಈ ದಿಶೆಯಲ್ಲಿ ಹಾಲೇವಾಡಿಮಠ ಸಹೋದರರ ಕಾರ್ಯ ಸ್ತುತ್ಯವಾದುದೆಂದರು. ಚಂಬಣ್ಣ ಬಾಳಿಕಾಯಿ ಅವರು ಭಾವಚಿತ್ರ ಬಿಡುಗಡೆ ಮಾಡಿ ಮಾತನಾಡಿ ಹಾಲೆವಾಡಿಮಠ ಬಂಧುಗಳು ಕೈಗೊಂಡಿರುವ ಧಾರ್ಮಿಕ ಕಾರ್ಯಗಳು ಇತರರಿಗೆ ಸ್ಫೂರ್ತಿದಾಯಕವಾಗಿವೆ ಎಂದರು. ಗದಗ ಸರ್ಕಾರಿ ಮಹಿಳಾ ಕಾಲೇಜಿನ ಡಾ|| ಸಿದ್ಧಲಿಂಗೇಶ ಸಜ್ಜನಶೆಟ್ರ ಉಪನ್ಯಾಸ ನೀಡಿದರು. ವೀರೇಶ ಕೂಗು, ವಿಜಯ ಮಹಾಂತಶೆಟ್ಟರ, ಕುಬೇರಪ್ಪ ಮಹಾಂತಶೆಟ್ಟರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನೇತೃತ್ವ ವಹಿಸಿದ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ದುಡಿಮೆಯ ಬದುಕಿನಿಂದ ಉತ್ಕರ್ಷ ಸಾಧ್ಯ. ನಡೆಯುವ ಕಾಲು ದುಡಿಯುವ ಕೈಗಳು ಇರದಿದ್ದರೆ ಏನೂ ಮಾಡಲಾಗದು. ಅರಮನೆ ಇರಲಿ ಗುಡಿಸಲೇ ಇರಲಿ. ದುಡಿಯುವುದರಲ್ಲಿ ಉತ್ಸಾಹ ಇದ್ದರೆ ಬದುಕು ಬಲಗೊಳ್ಳುತ್ತದೆ ಎಂದರು. ಮೈಸೂರು-ಬನ್ನಿಕೊಪ್ಪದ ಡಾ||ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯರು, ಗಂಜೀಗಟ್ಟಿ ಡಾ|| ವೈಜನಾಥ ಶಿವಾಚಾರ್ಯರು, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು, ಕರೇವಾಡಿಮಠ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು. ಶಿವಲಿಂಗಯ್ಯ ಹಾಲೆವಾಡಿಮಠ ಕಾರ್ಯಕ್ರಮವನ್ನು ಸಂಯೋಜನೆಗೊಳಿಸಿದ್ದರು. ಡಾ. ಎಸ್.ಜಿ.ಹಾಲೆವಾಡಿಮಠ ಸ್ವಾಗತಿಸಿದರು. ಡಾ.ಪ್ರಭುಸ್ವಾಮಿ ಜಿ. ಹಾಲೆವಾಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ನಡೆÀಯಿತು. ಪಾರ್ವತಿ ಕಳ್ಳಿಮಠ ಪ್ರಾರ್ಥನೆ ಸಲ್ಲಿಸಿದರು. ಹೊನ್ನತ್ತಿಯ ಬಸವರಾಜ ಹಿರೇಮಠ ಭಕ್ತಿಗೀತೆ ಹಾಡಿದರು. ಸವಣೂರಿನ ಡಾ|| ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಸಮಾರಂಭದ ನಂತರ ಅನ್ನದಾಸೋಹ ಜರುಗಿತು.
ಸಮಾರಂಭಕ್ಕೂ ಮುನ್ನ ಹಾಲೇವಾಡಿಮಠದ ಆವರಣದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಶುಭ ಹಾರೈಸಿದರು.ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಅಂಗವಾಗಿ ನಗರದ ಪ್ರಮುಖ ರಸ್ತೆಯಲ್ಲಿ ರಸ್ತೆ ಮೂಲಕ ಶ್ರೀ ಜಗದ್ಗುರು ರೇಣುಕಾಚಾರ್ಯರ ಭವ್ಯ ಭಾವಚಿತ್ರದ ಸಾರೋಟ ಮೆರವಣಿಗೆ ಸಂಭ್ರಮದಿAದ ಜರುಗಿತು.
ಗುರುವಾರ ಸಂಜೆ ಮಾಜಿ ಮುಖ್ಯ ಮಂತ್ರಿ ಸಂಸದ ಬಸವರಾಜ ಬೊಮ್ಮಾಯಿಯವರು ಮುಕ್ತಿಮಂದಿರ ಕ್ಷೇತ್ರಕ್ಕೆ ಭೇಟಿ ನೀಡಿ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ಗದ್ದುಗೆ ದರ್ಶನ ಮಾಡಿ ಪ್ರಸ್ತುತ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ಆಶೀರ್ವಾದ ಪಡೆದರು.