Home ಕರ್ನಾಟಕಗುರು ಮತ್ತು ಗುರಿಯಿಂದ ಬದುಕು ಸಮೃದ್ಧ- ಶ್ರೀ ರಂಭಾಪುರಿ ಜಗದ್ಗುರುಗಳು.

ಗುರು ಮತ್ತು ಗುರಿಯಿಂದ ಬದುಕು ಸಮೃದ್ಧ- ಶ್ರೀ ರಂಭಾಪುರಿ ಜಗದ್ಗುರುಗಳು.

by Editor
0 comments

ಚೈತನ್ಯ ನ್ಯೂಸ್ 24 ಕಡೇನಂದಿಹಳ್ಳಿ (ಶಿಕಾರಿಪುರ)-ಮೇ-೯.
ಮಾನವ ಜನ್ಮ ಬಹು ಜನ್ಮದ ಪುಣ್ಯದ ಫಲ. ಅರಿವು ಮತ್ತು ಆಚಾರದಿಂದ ಮಾನವ ಜೀವನ ಉಜ್ವಲ. ಪ್ರತಿಯೊಬ್ಬ ಮನುಷ್ಯನಿಗೆ ಗುರು ಮತ್ತು ಗುರಿ ಇದ್ದಾಗ ಬದುಕು ಸಮೃದ್ಧಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶನಿವಾರ ಶಿಕಾರಿಪುರ ತಾಲೂಕಿನ ಕಡೆನಂದಿಹಳ್ಳಿ ಶ್ರೀಮದ್ ರಂಭಾಪುರಿ ಶಾಖಾಮಠದ ಶ್ರೀ ಗುರು ಪಟ್ಟಾಧಿಕಾರ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಬಾಳೆಗೊಂದು ಗೊನೆ ಇರುವಂತೆ ಬಾಳಿಗೊಂದು ಗುರಿ ಇರಬೇಕಾಗುತ್ತದೆ. ವೀರಶೈವ ಧರ್ಮದಲ್ಲಿ ಜ್ಞಾನ ಕ್ರಿಯಾತ್ಮಕ ಬೋಧನೆಗೆ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ಸಾಮಾಜಿಕ ವಲಯದಲ್ಲಿ ಎಲ್ಲರೊಂದಿಗೆ ಬೆರೆತು ಬಾಳುವುದೇ ಜೀವನದ ಗುರಿಯಾಗಬೇಕು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಸಿದ್ಧಾಂತ ಶಿಖಾಮಣಿ ಧರ್ಮ ಗ್ರಂಥದಲ್ಲಿ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳನ್ನು ಪ್ರತಿಪಾದಿಸಿದ್ದಾರೆ. ಇದೇ ದಾರಿಯಲ್ಲಿ ೧೨ನೇ ಶತಮಾನದ ಶರಣರ ಮುನ್ನಡೆದು ಬದುಕನ್ನು ಕಟ್ಟಿಕೊಂಡರು. ಸ್ವಾರ್ಥಕ್ಕಾಗಿ ಆದರ್ಶ ಮೌಲ್ಯಗಳನ್ನು ಯಾರೂ ಬಲಿ ಕೊಡಬಾರದು. ಧರ್ಮ ಸಂಸ್ಕೃತಿ ಪರಂಪರೆಯ ಪರಿಪಾಲನೆಯಿಂದ ಜಗದಲ್ಲಿ ಶಾಂತಿ ಸಾಮರಸ್ಯ ಬೆಳೆದು ಬರಲು ಸಾಧ್ಯವಾಗುತ್ತದೆ. ದುಗ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಮಠದ ಜೊತೆಗೆ ಜನ್ಮ ಭೂಮಿಯಾದ ಕಡೇನಂದಿಹಳ್ಳಿಯಲ್ಲಿರುವ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮವನ್ನು ಶ್ರೀಮದ್ ರಂಭಾಪುರಿ ಶಾಖಾ ಮಠವನ್ನಾಗಿ ಪರಿವರ್ತಿಸಿ ಇಂದು ಶ್ರೀಗಳವರಿಗೆ ಗುರು ಪಟ್ಟಾಧಿಕಾರ ಮತ್ತು ಷಟಸ್ಥಲ ಬ್ರಹ್ಮೋಪದೇಶ ನೀಡಿ ದಂಡ ಕಮಂಡಲ ಸಮೇತ ಪಂಚ ಮುದ್ರಾ ಅನುಗ್ರಹಿಸಿ ಶ್ರೀ ಶುಭ ಹಾರೈಸಲಾಗಿದೆ ಎಂದರು.

ಪವಿತ್ರ ಧರ್ಮ ಸಮಾರಂಭವನ್ನು ಸಮಾರಂಭವನ್ನು ಉದ್ಘಾಟಿಸಿದ ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಮಾತನಾಡಿ ಶಾಂತಿ ನೆಮ್ಮದಿ ಬದುಕಿಗೆ ಧರ್ಮವೊಂದೇ ಆಶಾಕಿರಣ. ವೀರಶೈವ ಧರ್ಮ ಸಕಲರ ಒಳಿತಿಗಾಗಿ ಸದಾ ಶ್ರಮಿಸುತ್ತಾ ಬಂದಿದೆ. ಈ ಧರ್ಮದ ಪಂಚಪೀಠಗಳು ರಾಷ್ಟ್ರೀಯ ಗುರುಪೀಠಗಳಾಗಿ ಧರ್ಮ ಸಂಸ್ಕೃತಿ ಪರಂಪರೆ ಆದರ್ಶ ಚಿಂತನೆಗಳನ್ನು ಬೋಧಿಸುತ್ತಾ ಬಂದಿದ್ದಾರೆ. ಕಡೇನಂದಿಹಳ್ಳಿ ಶ್ರೀ ರಂಭಾಪುರಿ ಪೀಠದ ಶಾಖಾ ಮಠಕ್ಕೆ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯರಿಗೆ ಪಟ್ಟ ಕಟ್ಟಿ ಅನುಗ್ರಹಿಸಿರುವುದು ಈ ಭಾಗದ ಭಕ್ತರ ಸೌಭಾಗ್ಯವೆಂದರು. ಮುಂಡಗೋಡ ಮಾಜಿ ಶಾಸಕ ವಿ.ಎಸ್. ಪಾಟೀಲ್ ಶ್ರೀಮಠದ ನೀಲ ನಕ್ಷೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.


ನೂತನ ಪಟ್ಟಾಧ್ಯಕ್ಷರಾದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಬದುಕು ಬದಲು ಆಗಬೇಕಾದರೆ ಬದುಕುವ ದಾರಿ ಬದಲಾಗಬೇಕಾಗುತ್ತದೆ. ಸತ್ಯ ಧರ್ಮ ಸಂಸ್ಕೃತಿ ಬೆಳೆಯುವುದರಲ್ಲಿ ಮನುಷ್ಯನ ಕಲ್ಯಾಣ ಅಡಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ಬೋಧನೆ ಸಾಧನೆ ನಿಮ್ಮೆಲ್ಲರ ಬಾಳಿಗೆ ಬಲ ತರುತ್ತದೆ. ಉಭಯ ಮಠಗಳ ಜವಾಬ್ದಾರಿಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ವಹಿಸಿದ್ದಾರೆ. ಎಲ್ಲ ಭಕ್ತರನ್ನು ಸನ್ಮಾರ್ಗದ ಕಡೆಗೆ ಕರೆತರುವ ಪ್ರಾಮಾಣಿಕ ಪ್ರಯತ್ನ ಮಾಡುವೆನೆಂದರು.


ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷ ಸಿಂದಗಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಚನ್ನಗಿರಿ, ತೊಗರ್ಸಿ, ಹಾರನಹಳ್ಳಿ, ರಟ್ಟಿಹಳ್ಳಿ, ನಾಗವಂದ, ಹೊನ್ನಾಳಿ, ಮಳಲಿ, ಕಾರ್ಜುವಳ್ಳಿ ಮೊದಲಾದ ೨೫ಕ್ಕೂ ಹೆಚ್ಚು ಶ್ರೀಗಳು ಪಾಲ್ಗೊಂಡಿದ್ದರು.
ಶ್ರೀ ಮಠದ ಪುರೋಹಿತ ವರ್ಗದಿಂದ ವೇದಘೋಷ ಜರುಗಿತು. ಚನ್ನೇಶ ಶಾಸ್ತಿçಗಳು ಮಠದ ಸ್ವಾಗತಿಸಿದರು. ಕಲಬುರ್ಗಿಯ ಶಿವಾನಂದ ಮಂದೇವಾಲ ಪ್ರಾರ್ಥಿಸಿದರು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಕಾರ್ಯಕ್ರಮ ನಂತರ ಸರ್ವರಿಗೂ ಅನ್ನ ದಾಸೋಹ ಜರುಗಿತು.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು