ಚೈತನ್ಯ ನ್ಯೂಸ್ 24 ನವಲಗುಂದ ಮೇ.13:
ಸಮಾಜದ ಎಲ್ಲ ರಂಗಗಳಲ್ಲಿ ಹೆಚ್ಚುತ್ತಿರುವ ಸಂಘರ್ಷ ನಿಂತು ಶಾಂತಿ ಸಾಮರಸ್ಯ ಮೂಡಿಸುವ ಕೆಲಸ
ಮಠಗಳಿಂದ ನಡೆಯುಬೇಕು. ಒಡೆದ ಮನಸ್ಸುಗಳನ್ನು ಬೆಸೆಯುವುದೇ ನಿಜವಾದ ಧರ್ಮದ ಗುರಿಯಾಗಿದೆ ಎಂದು
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ಸ್ಥಳೀಯ ಪಂಚಗೃಹ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವ ಧರ್ಮ
ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಧರ್ಮ ಸಂಸ್ಕೃತಿಯ ಮತ್ತು ತತ್ವ ಸಿದ್ಧಾಂತ ಪರಂಪರೆಗಳ ತಾಯ್ನಾಡು ಭಾರತ. ವಿಪತ್ತಿನ ಕಾಲದಲ್ಲೂ ಸಹ
ಧರ್ಮವನ್ನು ಬಿಡಲಾರದಿರುವವನು ನಿಜವಾದ ಧರ್ಮಾತ್ಮ. ನದಿ ಸಮುದ್ರಗಳನ್ನು ಸೇತುವೆ ಮೂಲಕ ಗುಡ್ಡ ಬೆಟ್ಟಗಳನ್ನು
ಸುರಂಗ ಮಾರ್ಗ ನಿರ್ಮಿಸಿ ದಾಟಬಹುದು. ಆದರೆ ಮನದ ಮಧ್ಯೆ ನಿರ್ಮಾಣಗೊಂಡ ಸ್ವಾರ್ಥದ ಗೋಡೆಗಳನ್ನು
ದಾಟುವುದು ತುಂಬಾ ಕಷ್ಟ. ಗಾಡಾಂಧಕಾರದಲ್ಲಿ ಮುಳುಗಿದ ಮಾನವರನ್ನು ಎಚ್ಚರಿಸಿ ಜಾಗೃತಿ ಉಂಟು ಮಾಡುವುದೇ
ಧಾರ್ಮಿಕ ಕೇಂದ್ರಗಳ ಮುಖ್ಯ ಗುರಿಯಾಗಿದೆ. ವೀರಶೈವ ಧರ್ಮ ಸಕಲರಿಗೂ ಒಳಿತನ್ನೇ ಬಯಸುತ್ತಾ ಬಂದಿದೆ. ಶ್ರೀ
ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ. ನವಲಗುಂದ
ಪಹಚಗೃಹ ಹಿರೇಮಠಕ್ಕೆ ಇಂದು ಶ್ರೀ ಇಮ್ಮಡಿ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೂತನ ಶ್ರೀಗಳಾಗಿ ಗುರುತ್ವಾಧಿಕಾರ
ಸ್ವೀಕರಿಸಿದ್ದಾರೆ. ನೂತನ ಶ್ರೀಗಳು ಧರ್ಮ ಮತ್ತು ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಲೆಂದು ರೇಶ್ಮೆ ಮಡಿ
ಸ್ಮರಣಿಕೆ ಫಲ ಪುಷ್ಪವಿತ್ತು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳ ತಾಳ್ಮೆ ಮತ್ತು ಧರ್ಮ ಶ್ರದ್ಧಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ರೇಶ್ಮೆ ಮಡಿ ಫಲ ಪುಷ್ಪವಿತ್ತು ಆಶೀರ್ವದಿಸಿದರು.
ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಮಾನವೀಯ
ಸಂಬ0ಧಗಳನ್ನು ಸದೃಢಗೊಳಿಸಲು ಆಯಾ ಕಾಲ ಘಟ್ಟಗಳಲ್ಲಿ ಆಚಾರ್ಯರು ಋಷಿಮುನಿಗಳು ಸಂತ ಮಹ0ತರು
ಅವತರಿಸಿ ಬಾಳಿಗ ಬೆಳಕು ತೋರಿಸಿದ್ದಾರೆ. ಸತ್ಯ ಶಾಂತಿ, ಸಾಮರಸ್ಯ ಸೌಹಾರ್ದತೆ, ಧರ್ಮನಿಷ್ಠೆ ದೇಶ ಭಕ್ತಿ ಬೆಳೆಸುವ
ನಿಟ್ಟಿನಲ್ಲಿ ಮಠಗಳು ಕಾರ್ಯ ಮಾಡುತ್ತಾ ಬಂದಿವೆ. ಪಂಚಗೃಹ ಹಿರೇಮಠದ ನೂತನ ಶ್ರೀಗಳವರು ಸಮಾಜಕ್ಕೆ ಅಮೂಲ್ಯ
ಮಾರ್ಗದರ್ಶನ ನೀಡುವ ಶಕ್ತಿಯನ್ನು ಭಗವಂತ ಅನುಗ್ರಹಿಸಲೆಂದರು. ಸಾನ್ನಿಧ್ಯ ವಹಿಸಿದ ಶ್ರೀ ಶ್ರೀಶೈಲ ಡಾ||ಚನ್ನಸಿದ್ಧರಾಮ
ಪಂಡಿತಾರಾಧ್ಯ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಮರೆಯುವುದು ಮನುಷ್ಯನ ಗುಣ. ಮರೆತು ಹೋದುದನ್ನು
ನೆನಪು ಮಾಡಿಕೊಡುವುದೇ ಮಠಗಳ ಕೆಲಸ. ಹೃದಯ ಹೃದ್ಭೂಮಿ ಕೃಷಿಗೈದು ಶಿವಜ್ಞಾನದ ಅರಿವನ್ನು ಉಂಟು
ಮಾಡುವುದೇ ಗುರು ಧರ್ಮವಾಗಿದೆ. ಮಠಗಳು ಸಂಸ್ಕಾರ ಸಚ್ಚಾರಿತ್ರ್ಯೆ ಬೋಧಿಸುವ ಕೆಂದ್ರಗಳಾಗಬೇಕು . ನೂತನ
ಶ್ರೀಗಳವರು ಆತ್ಮ ಸಂಯಮದಿ0ದ ಬಾಳಿ ಭಕ್ತರಿಗೆ ಕಣ್ಮಣಿಯಾಗಲೆಂದು ಶುಭ ಹಾರೈಸಿದರು.

ಸಾನ್ನಿಧ್ಯ ವಹಿಸಿದ ಶ್ರೀ ಕಾಶೀ ಡಾ|| ಚಂದ್ರಶೇಖರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಯೋಗಿ, ಭೋಗಿ
ಮತ್ತು ರೋಗಿ ಯಾವಾಗಲೂ ಎಚ್ಚರವಾಗಿರುತ್ತಾರೆ. ಯೋಗಿ ಸಾಧನೆಗಾಗಿ ಭೋಗಿ ಇಂದ್ರಿಯ ಸುಖಕ್ಕಾಗಿ ರೋಗಿ
ವೇದನೆಯಿಂದ ಎಚ್ಚರವಾಗಿರುತ್ತಾರೆ. ಅರಿವಿನ ಕಣ್ಣು ತೆರೆಸಲು ಅಜ್ಞಾನ ದೂರ ಮಾಡಲು ಶ್ರೀ ಗುರು ಅವಶ್ಯಕ. ವೀರಶೈವ
ಧರ್ಮ ಇದೊಂದು ಅಶ್ವತ್ಥ ವೃಕ್ಷ ಇದ್ದಂತೆ. ನವಲಗುಂದ ಪಂಚಗೃಹ ಹಿರೇಮಠ ಕಾಶೀ ಪೀಠದ ಶಾಖಾ ಮಠವಾಗಿದೆ.
ಹಿಂದಿನ ಸಿದೇಶ್ವರ ಶಿವಾಚಾರ್ಯರ ಚಿಂತನ ಇಂದಿನ ನೂತನ ಶ್ರೀಗಳ ಕ್ರಿಯಾಶೀಲ ಬದುಕು ಶ್ರೀ ಮಠದ
ಶ್ರೇಯೋಭಿವೃದ್ಧಿಗೆ ಮತ್ತು ಭಕ್ತ ಸಂಕುಲದ ಒಳಿತಿಗಾಗಿ ಶ್ರಮಿಸಲೆಂದು ನೂತನ ಶ್ರೀಗಳವರಿಗೆ ದಂಡ ಕಮಂಡಲ
ಪ0ಚಮುದ್ರಾ ಸಮೇತ ಶುಭ ಹಾರೈಸಿದರು. ಸಾನ್ನಿಧ್ಯ ವಹಿಸಿದ ಶ್ರೀ ಕಾಶೀ ನೂತನ ಡಾ.ವಿಶ್ವಾರಾಧ್ಯ ಮಲ್ಲಿಕಾರ್ಜುನ
ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಮನುಷ್ಯ ಜೀವನದಲ್ಲಿ ಚತುರ್ವಿಧ ಪುರುಷಾರ್ಥಗಳ ಸಂಪಾದನೆಯಲ್ಲಿ
ಒ0ದನ್ನಾದರೂ ಗಳಿಸಿಕೊಳ್ಳದಿದ್ದರೆ ಮಾನವ ಜೀವನ ವ್ಯರ್ಥವಾಗುತ್ತದೆ. ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ
ಇರುವುದೆಲ್ಲವೂ ಅಮೂಲ್ಯ ಸಂಪತ್ತು. ಚಿನ್ನವಿಲ್ಲದೇ ಬದುಕಬಹುದು. ಆದರೆ ಅನ್ನವಿಲ್ಲದೇ ಬದುಕಲಾಗದು. ಮನುಷ್ಯನ
ಮನಸ್ಸೆಂಬ ಆವೇಶದ ಚಂಚಲದ ಹೊಯ್ದಾಟವನ್ನು ಶಾಂತ ಪ್ರಶಾಂತಗೊಳಿಸಿ ಸನ್ಮಾರ್ಗಕ್ಕೆ ಕರೆದೊಯ್ಯುವುದೇ ಗುರುವಿನ
ಧರ್ಮವಾಗಿದೆ. ನೂತನ ಶ್ರೀಗಳಿಂದ ಮಠದ ಅಭಿವೃದ್ಧಿ ಭಕ್ತರಿಗೆ ಮಾರ್ಗದರ್ಶನ ನೀಡುವ ಶಕ್ತಿಯನ್ನು ಆಚಾರ್ಯರು
ಅನುಗ್ರಹಿಸಲೆಂದು ಶುಭ ಹಾರೈಸಿದರು. ನೂತನ ಶ್ರೀಗಳವರಿಗೆ ಹಿರಿಯ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಷಟಸ್ಥಲ ಬ್ರಹ್ಮೋಪದೇಶ ನೀಡಿ ಗುರುತ್ವ ಅಧಿಕಾರ ಅನುಗ್ರಹಿಸಿದರು.
ನೂತನ ಶ್ರೀಗಳ ಸಂದೇಶ: ನವಲಗುಂದ ಪಂಚಗೃಹ ಹಿರೇಮಠದ ನೂತನ ಇಮ್ಮಡಿ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು
ಮಾತನಾಡಿ ಪೂರ್ವ ಜನ್ಮದ ಸುಕೃತ ಮತ್ತು ಸಿದ್ಧೇಶ್ವರ ಶಿವಾಚಾಚಾರ್ಯರ ಆಶೀರ್ವಾದದಿಂದ ಶ್ರೀ ಮಠದ
ಪಟ್ಟಾಧ್ಯಕ್ಷನಾಗಿರುವೆ. ವೀರಶೈವ ಧರ್ಮ ಪರಂಪರೆಯ ಆದರ್ಶ ಮೌಲ್ಯಗಳ ಸಂರಕ್ಷಣೆ-ಗುರುಸ್ಥಲದ ಮಹತ್ವವನ್ನು ಅರಿತು
ಭಕ್ತ ಸಂಕುಲಕ್ಕೆ ಮಾರ್ಗದರ್ಶನ ಮಾಡುವೆ. ಹೊರಗಿನ ಸಿರಿ ಸಂಪತ್ತಿಗಿ0ತ ಆಧ್ಯಾತ್ಮ ಸಂಪತ್ತು ದೊಡ್ಡದು. ಶ್ರೀ ಜಗದ್ಗುರು
ಪಂಚ ಪೀಠಾಧೀಶ್ವರರ ಕೃಪಾಶೀರ್ವಾದದಿಂದ ಶ್ರೀ ಮಠದ ಅಭಿವೃದ್ಧಿ, ಭಕ್ತರಿಗೆ ಸಂಸ್ಕಾರ ಮತ್ತು ಗುಣಾತ್ಮಕ ರಚನಾತ್ಮಕ
ಕಾರ್ಯಗಳನ್ನು ಮಾಡುತ್ತೇನೆಂದು ಸಂಕಲ್ಪ ಕೈಕೊಂಡರು.

ಪಂಚಗೃಹ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ ಪರಮಾಚಾರ್ಯರ
ಆಶೀರ್ವಾದ ಮತ್ತು ಭಕ್ತರ ಸಹಕಾರ ದೊಡ್ಡದು. ಇದೇ ರೀತಿ ಮುಂದೆ ಸಹ ನಮ್ಮ ಮತ್ತು ನೂತನ ಶ್ರೀಗಳವರಲ್ಲಿ
ಸದ್ಭಾವನೆಯಿಟ್ಟುಕೊಂಡು ಶ್ರೀ ಮಠದ ಅಭಿವೃದ್ಧಿ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡೋಣ ಎಂದರು.
ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ ಪಂಚಗೃಹ ಹಿರೇಮಠ ಭಕ್ತರಿಗೆ ಶ್ರದ್ಧಾ ಕೇಂದ್ರವಾಗಿದೆ. ನೂತನ
ಶ್ರೀಗಳು ಶ್ರೀ ಮಠದ ಪರಂಪರೆಯನ್ನು ಮುಂದುವರೆಸಿಕೊ0ಡು ಹೋಗುವ ಜೊತೆಗೆ ಹಿರಿಯ ಶ್ರೀಗಳ ಮಾರ್ಗದರ್ಶನದಲ್ಲಿ
ಮುನ್ನಡೆಯಬೇಕು. ಸಮಾಜದಲ್ಲಿ ಸಾಮರಸ್ಯ ಸದ್ಬಾವನೆ ಬೆಳೆಸಿ ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ
ಕಾರಣರಾಗಬೇಕು ಎಂದರು.
ಸಮಾರಂಭದಲ್ಲಿ ಸುಳ್ಳ, ಶಿರಕೋಳ, ನೆಗಳೂರು, ನವನಗರ, ಹುಬ್ಬಳ್ಳಿ, ಬ್ಯಾಹಟ್ಟಿ, ಮೊರಬ ಮೊದಲಾದ ಶ್ರೀಗಳು…
ಉಪಸ್ಥಿತರಿದ್ದರು. ನರಗುಂದ ಪಂಚಗೃಹ ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ನಿರೂಪಿಸಿದರು.