ಚೈತನ್ಯ ನ್ಯೂಸ್ 24, ಗಜೇಂದ್ರಗಡ: ಮೇ.22:
ವಿಶೇಷ ವರದಿ: ಸಂತೋಷ ಯಳಮಲಿ, ನರೇಗಲ್ಲ.
ವಯಸ್ಸು 80 ದಾಟಿದರೂ, ಕೆಲಸ ಮಾಡುವ ಹುಮ್ಮಸ್ಸು ಮಾತ್ರ ಕುಗ್ಗಿಲ್ಲ! ಇಳಿ ವಯಸ್ಸಿನಲ್ಲೂ ದುಡಿದು ತಿನ್ನಬೇಕು ಎನ್ನುವ ಛಲಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿದೆ.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಂಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ವೀರಾಪೂರು ಗ್ರಾಮದ ನಿವಾಸಿಯಾದ 80 ವರ್ಷದ ಹನಮವ್ವ ಹನಮಪ್ಪ ಮೊಹಿತೆ ಅವರ ದುಡಿಮೆಗೆ ನರೇಗಾ ವರದಾನವಾಗಿದೆ. ಈ ಹನಮವ್ವನಿಗೆ ಪತಿ ಇಲ್ಲ. ಇಬ್ಬರು ಗಂಡು ಮಕ್ಕಳು ಇದ್ದು, ಒಬ್ಬ ಮಗ ಬೇರೆ ಮನೆ ಮಾಡಿದ್ದಾರೆ. ಇನ್ನೊಬ್ಬನ ಮಗನ ಜೊತೆಗೆ ಇದ್ದರೂ ಕಳೆದ 8 ವರ್ಷಗಳಿಂದ ಮಗ ದುಡಿಯಲು ಹೋದವನು ಮರಳಿ ಮನೆಗೆ ಬಂದಿಲ್ಲ. ಈಗ ಸೊಸಿಯೊಂದಿಗೆ ಜೀವನ ಸಾಗಿಸುತ್ತಿದ್ದಾರೆ.

ತಮ್ಮ 2 ಎಕರೆ ಜಮೀನಿದ್ದು, ಅದು ಒಣ ಬೇಸಾಯವಾಗಿದೆ. ಜೀವನಕ್ಕೆ ಇಷ್ಟು ಸಾಕಾಗುವುದಿಲ್ಲ. ಎಂಬುದು ಅರಿತು ಸೊಸೆ ಹೊರಗಡೆ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಬೇಸಿಗೆಯಲ್ಲಿ ಕೆಲಸವಿಲ್ಲದೆ ಜೀವನ ನಡೆಸುವುದು ಕಷ್ಟ ಎನ್ನುವುದನ್ನು ಅರಿತು ಸೊಸೆಯ ಜೊತೆಗೆ ನರೇಗಾ ಯೋಜನೆಯಲ್ಲಿ ಹನಮವ್ವ ಹನಮಪ್ಪ ಮೊಹಿತೆ ಅವರು, ಸುಮಾರು 20 ವರ್ಷಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮನರೇಗಾ ಕಾಮಗಾರಿಯಲ್ಲಿ ಉತ್ಸಹದಿಂದ ಕೂಲಿ ಕೆಲಸ ಮಾಡುತ್ತಾ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ.

ಈ ಹನಮವ್ವನಿಗೂ 78 ವಯಸ್ಸು : ಹನಮವ್ವ ಯಲ್ಲಪ್ಪ ಮೊಹಿತೆ ಅವರು 78 ವರ್ಷ ವಯಸ್ಸಾದರೂ ದುಡಿಯುವ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ. ನರೇಗಾ ಕೆಲಸ ಪ್ರಾರಂಭವಾದರೆ ಸಾಕು ನಾನು ಕೆಲಸಕ್ಕೆ ಬರುತ್ತೇನೆ
ಎಂದು ಉತ್ಸಾಹದಿಂದ ನಮೂನೆ 6 ರಲ್ಲಿ ಹೆಸರು ಬರೆಯಿಸಿ ಖುಷಿಯಿಂದ ಕೆಲಕ್ಕೆ ಬರುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಈ ಹನಮವ್ವನಿಗೆ ಪತಿ ಇಲ್ಲ. ಇಬ್ಬರು ಗಂಡು ಮಕ್ಕಳು ಇದ್ದು, ಹಿರಿಯ ಮಗನೊಂದಿಗೆ ಜೀವನ ಸಾಗಿಸುತ್ತಿದ್ದಾರೆ. ಮನೆಯಲ್ಲಿ ಕುಳಿತುಕೊಳ್ಳದೆ ಮಕ್ಕಳಿಗೆ ಸಹಾಯ ಮಾಡಬೇಕು ಎನ್ನುವ ಹಂಬಲಕ್ಕೆ ಮಕ್ಕಳು ಹಾಗೂ ಸೊಸೆಯಂದಿರ ಜೊತೆಗೆ ನರೇಗಾ ಯೋಜನೆಯಡಿ ದುಡಿಯುತ್ತಾ ನೆಮ್ಮದಿ ಬದುಕು ನಡೆಸುತ್ತಿದ್ದಾರೆ.
ನರೇಗಾ ಯೋಜನೆಯಲ್ಲಿ ಹನಮವ್ವ ಯಲ್ಲಪ್ಪ ಮೊಹಿತೆ ಅವರು, ಸುಮಾರು 20 ವರ್ಷಗಳಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮನರೇಗಾ ಕಾಮಗಾರಿಯಲ್ಲಿ ಉತ್ಸಹದಿಂದ ಕೂಲಿ ಕೆಲಸ ಮಾಡುತ್ತಾ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ.

ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಊರಲ್ಲಿ ಕೆಲಸ ಇರಲ್ಲ. ಇಂತ ಸಮಯದಲ್ಲಿ ಹನಮವ್ವ ಹನಮಪ್ಪ ಮೊಹಿತೆ, ಹನಮವ್ವ ಯಲ್ಲಪ್ಪ ಮೊಹಿತೆ ಅವರ ಕುಟುಂಬಕ್ಕೆ ದುಡಿಯಲು ನರೇಗಾ ಯೋಜನೆ ತುಂಬಾ ನೆರವಾಗಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆ ಗ್ರಾಮೀಣ ಭಾಗದ ವಯೋವೃದ್ಧರು ಮತ್ತು ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ 50 ರಷ್ಟು ರಿಯಾಯತಿ ನೀಡುವುದರ ಮೂಲಕ ಸಾಕಷ್ಟು ಬಡ ಕೂಲಿಕಾರರಿಗೆ ನರೇಗಾ ನೆರವಾಗಿದೆ.
ಕೋಟ್ಸ್..
ಬೇಸಿಗೆಯಲ್ಲಿ ಹಳ್ಳಿಯೋಳಗೆ ಕೆಲಸ ಇರಲ್ಲರೀ.. ಉದ್ಯೋಗ ಖಾತ್ರಿ ಕೆಲಸ ಪ್ರಾರಂಭವಾದರೆ ಎಲ್ಲರೂ ಕೆಲಸಕ್ಕೆ ಬರುತ್ತಾರೇ ರೀ ಅದರಲ್ಲಿ ನಾವು ಕೆಲಸಕ್ಕೆ ಬಂದು ನಾಲ್ಕು ರೂಪಾಯಿ ದುಡಿತಿವಿರೀ.. ದೇಹದಲ್ಲಿ ಇನ್ನೂ ದುಡಿಯುವ ಶಕ್ತಿ ಇದೆ. ಮನೆಯಲ್ಲಿ ಖಾಲಿ ಕುಳಿತ್ತುಕೊಳ್ಳುವ ಬದಲು ಉದ್ಯೋಗ ಖಾತ್ರಿ ಕೆಲಸಕ್ಕೆ ಬರುತ್ತೇವೆ. ನಾಲ್ಕು ರೂಪಾಯಿ ಬಂದರೆ ಉಪಜೀವನಕ್ಕೆ ಅನುಕೂಲವಾಗುತ್ತದೆ.

– ಹನಮವ್ವ ಮೊಹಿತೆ, ಕೂಲಿಕಾರರು ವೀರಾಪೂರ ಗ್ರಾಮ.
ಕೋಟ್..
ಗ್ರಾಮೀಣ ಪ್ರದೇಶದಲ್ಲಿ ನರೇಗಾ ಜಾಬ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ಕೂಲಿಕಾರರು ನರೇಗಾ ಯೋಜನೆಯಡಿ ಕೆಲಸ ಮಾಡಬಹುದು. ಇದರಲ್ಲಿ ಯಾವುದೇ ವಯಸ್ಸಿನ ಮೀತಿ ಇಲ್ಲ. ದುಡಿಯುವ ಶಕ್ತಿ ಇದ್ದವರು ಎಲ್ಲರೂ ಕೆಲಸ ಮಾಡಬಹುದು. ವಯೋವೃದ್ಧರಿಗೆ ಹಾಗೂ ವಿಕಲಚೇತನರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗುತ್ತಿದೆ.

– ವಿಶ್ವನಾಥ ರಾಠೋಡ, ಸಹಾಯಕ ನಿರ್ದೇಶಕರು (ಗ್ರಾ.ಉ) ತಾ.ಪಂ.ಗಜೇಂದ್ರಗಡ
ಕೋಟ್…
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಭಾಗದ ವಯೋವೃದ್ಧರು ಮತ್ತು ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ% 50 ರಷ್ಟು ರಿಯಾಯತಿ ನೀಡುವುದರ ಮೂಲಕ ಸಾಕಷ್ಟು ಕೂಲಿಕಾರರಿಗೆ ನರೇಗಾ ವರದಾನವಾಗಿದೆ. ಬೇಸಿಗೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಕೆಲಸವಿಲ್ಲದೆ ಗುಳೆ ಹೋಗುವುದನ್ನು ತಪ್ಪಿಸಲು ಇದ್ದೂರಲ್ಲೇ ಕೆಲಸ ಕೊಟ್ಟು ಆರ್ಥಿಕವಾಗಿ ಸಬಲರನ್ನಾಗಿ ಮಾಡಲಾಗುತ್ತದೆ. ಗ್ರಾಮೀಣ ಭಾಗದ ಪ್ರತಿಯೊಬ್ಬರು ಕೂಲಿಕಾರರು ನರೇಗಾ ಯೋಜನೆಯ ಲಾಭ ಪಡೆದುಕೊಳ್ಳಬೇಕು.

– ಚಂದ್ರಶೇಖರ ಬಿ ಕಂದಕೂರ, ಇಒ ತಾ.ಪಂ. ಗಜೇಂದ್ರಗಡ.