ಚೈತನ್ಯ ನ್ಯೂಸ್ 24, ನವಲಗುಂದ ಮೇ.13:
ಭಾರತೀಯ ಪುಣ್ಯ ಭೂಮಿಯಲ್ಲಿ ಹಲವಾರು ಧರ್ಮಗಳು ಮತ್ತು ಆಚರಣೆಗಳು ಬೆಳೆದುಕೊಂಡು ಬಂದಿವೆ.
ಅವುಗಳು ಜನ ಸಮುದಾಯದ ಮೇಲೆ ಅಪಾರ ಪ್ರಭಾವ ಬೀರಿವೆ. ಈ ನಾಡಿನ ಜನರು ಸಂಸ್ಕೃತಿಯ ಪಾವಿತ್ರತೆಯನ್ನು
ಕಾಪಾಡಿಕೊಂಡು ಬರುವ ಅವಶ್ಯಕತೆಯಿದೆ. ಮೌಲ್ಯಗಳ ಅಳಿವು ಉಳಿವು ಮಾನವನ ಆಚರಣೆಯಲ್ಲಿದೆ ಎಂದು
ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಸ್ಥಳೀಯ ಪಂಚಗೃಹ ಹಿರೇಮಠದ ಶ್ರೀ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ
ಆಯೋಜಿಸಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮೌಲ್ಯಗಳ ಸಂರಕ್ಷಣೆಯೇ ಧರ್ಮ ಪೀಠಗಳ ಮೂಲ ಗುರಿಯಾಗಿದೆ. ನೀತಿವಂತರು ನಿರಾಶರಾಗಬಾರದು.
ನೋವು ನುಂಗಿ ನಲಿವನ್ನು ತೋರಬೇಕಾಗಿದೆ. ಬಹಳಷ್ಟು ಜನರಿಗೆ ಕರ್ತವ್ಯ ಪ್ರಜ್ಞೆಯಿಲ್ಲ. ನೀತಿ ಸಂಹಿತೆ ಅರಿತವನಿಗೆ
ನೆಮ್ಮದಿಯ ಫಲ ಪ್ರಾಪ್ತವಾಗುತ್ತದೆ. ಸತ್ಯ ಶುದ್ಧವಾದ ಧರ್ಮ ಮಾರ್ಗದಲ್ಲಿ ಮನುಷ್ಯ ನಡೆದು ಸುಖ ಶಾಂತಿ
ಪಡೆಯಬೇಕಾಗಿದೆ. ವೀರಶೈವ ಧರ್ಮದಲ್ಲಿರುವ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು ಬದುಕಿನ ವಿಕಾಸಕ್ಕೆ
ಸೋಪಾನವಾಗಿದೆ. ಇತಿಹಾಸ-ಪರಂಪರೆವುಳ್ಳ ನವಲಗುಂದ ಪಂಚಗೃಹ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು
ಆದರ್ಶ ಪರಂಪರೆ ಗುರುವಿನ ಪಾವಿತ್ರತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ನಾಳಿನ ಶುಭ ಮುಹೋರ್ತದಲ್ಲಿ ನೂತನ
ಶ್ರೀಗಳಿಗೆ ಗುರುತ್ವಾಧಿಕಾರ ಅನುಗ್ರಹಿಸಿ ಶುಭ ಹಾರೈಸಲಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಅಸಹನೆ ಅಸಮಾಧಾನ
ಅತೃಪ್ತಿಯಿಂದ ಬಳಲುತ್ತಿರುವ ಮನುಷ್ಯನಿಗೆ ಧರ್ಮದ ಅರಿವಿನಿಂದ ಬಾಳಿ ಬದುಕಲು ಸಾಧ್ಯವಾಗುತ್ತದೆ. ಮನುಷ್ಯನಲ್ಲಿ
ಒಳ್ಳೆಯ ಮತ್ತು ಕೆಟ್ಟ ಗುಣಗಳೆರಡೂ ಇವೆ. ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುತ್ತದೆ. ಅರಿವಿನ
ಆದರ್ಶ ಜೀವನ ಪ್ರಾಪ್ತಿಗಾಗಿ ದೇವರು ಧರ್ಮ ಮತ್ತು ಗುರುವಿನಲ್ಲಿ ನಂಬಿಗೆ ವಿಶ್ವಾಸವನ್ನಿಟ್ಟು ಬಾಳುವ ಅವಶ್ಯಕತೆಯಿದೆ
ಎಂದರು. ಸಾನ್ನಿಧ್ಯ ವಹಿಸಿದ ಶ್ರೀ ಶ್ರೀಶೈಲ ಡಾ||ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ
ಒಟ್ಟು ಸಾವು ಯಾರನ್ನೂ ಬಿಟ್ಟಿಲ್ಲ. ಹುಟ್ಟು ಸಾವುಗಳ ಮಧ್ಯದ ಬದುಕು ಶ್ರೀಮಂತಗೊಳಿಸಿಕೊಳ್ಳಬೇಕಾದದ್ದು ಅವರವರ
ಜವಾಬ್ದಾರಿ. ಮನುಷ್ಯ ದೊಡ್ಡ ದೊಡ್ಡ ಮಾತುಗಳನ್ನಾಡುತ್ತಾನೆ. ಆದರೆ ದೊಡ್ಡವನಾಗಿ ಬಾಳಲು ಸಾಧ್ಯವಾಗುತ್ತಿಲ್ಲ. ದೊಡ್ಡ ಮನಸ್ಸು ದೊಡ್ಡ ಗುಣದಿಂದ ದೊಡ್ಡಸ್ತಿಕೆ ಸಿಗುತ್ತದೆ. ಶ್ರೀ ಜಗದ್ಗುರು ಪಂಚಾಚಾರ್ಯರು ಜೀವನ ಮೌಲ್ಯಗಳ ಸಾರವನ್ನು ಅರಿತು ಬಾಳಿದರೆ ಜೀವನ ಸಾರ್ಥಕಗೊಳ್ಳುವುದೆಂದರು.

ಸಾನ್ನಿಧ್ಯ ವಹಿಸಿದ ಶ್ರೀ ಮತ್ಕಾಶೀ ಡಾ|| ಚಂದ್ರಶೇಖರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಶ್ರದ್ಧೆ ನಿಷ್ಠೆ ಮತ್ತು
ಅನುಭಾವದಿಂದ ಬದುಕು ನಿರಾಳ. ಸಮರಸದ ನುಡಿ ನಡೆ ಚೆಂದ. ಸಮರಸವೇ ಸರ್ವ ಸೌಭಾಗ್ಯಕ್ಕೆ ಸೋಪಾನ.
ಜಗದೊಡೆಯನ ಧ್ಯಾನ ಮಾಡಿ ಬದುಕಿನಲ್ಲಿ ಶಾಂತಿ ಕಾಣಬೇಕಾಗಿದೆ. ವೀರಶೈವ ಧರ್ಮದ ತತ್ವತ್ರಯಗಳ
ಪರಿಪಾಲನೆಯಿಂದ ಜೀವನ ಪಾವನಗೊಳ್ಳುತ್ತದೆ. ಇತಿಹಾಸವುಳ್ಳ ನವಲಗುಂದ ಪಂಚಗೃಹ ಹಿರೇಮಠದ ಸಿದ್ಧೇಶ್ವರ
ಶಿವಾಚಾರ್ಯರು ತಮ್ಮ ಉತ್ತರಾಧಿಕಾರಿಗಳಿಗೆ ಗುರುತ್ವಾಧಿಕಾರ ನೀಡಿ ಶುಭ ಹಾರೈಸುತ್ತಿರುವುದು ಭಕ್ತರ ಸೌಭಾಗ್ಯವೆಂದರು.
ಸಾನ್ನಿಧ್ಯ ವಹಿಸಿದ ಶ್ರೀ ಕಾಶೀ ನೂತನ ಡಾ.ವಿಶ್ವಾರಾಧ್ಯ ಮಲ್ಲಿಕಾರ್ಜುನ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ
ನೆಮ್ಮದಿಯ ಬದುಕಿಗೆ ಧರ್ಮವೊಂದೇ ಆಶಯ. ಧರ್ಮ ಸಂಸ್ಕೃತಿ ಸಭ್ಯತೆ ಸದ್ಗುಣ ಸಂಸ್ಕಾರ ಜನರ ನಿಜವಾದ ಆಸ್ತಿ.
ಹೊರಗಿನ ಸಿರಿ ಸಂಪತ್ತು ನಾಶವಾಗಬಹುದು ಆದರೆ ಆಧ್ಯಾತ್ಮ ಸಂಪತ್ತು ಯಾವಾಗಲೂ ಇರುತ್ತದೆ ಎಂದರು.
ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್.ಕೋನರೆಡ್ಡಿ ಮಾತನಾಡಿ ಧರ್ಮ ಸಮಾರಂಭ ಉದ್ಘಾಟಿಸಿ ದುಷ್ಟ ಜನರ
ಸಹವಾಸದಿಂದ ದೂರವಿದ್ದು ಭವ ಬಂಧನ ಪರಿಹರಿಸುವ ಶ್ರೀ ಗುರುವನ್ನು ಕೂಡಿ ಬಾಳಬೇಕು. ನೀರು ಎರೆದವನಿಗೂ
ಕಡಿಯ ಬಂದವರಿಗೂ ಮರ ನೆರಳು ನೀಡಿ ಹಣ್ಣು ಕೊಡುತ್ತದೆ. ನಮ್ಮಿಂದ ಸಹಾಯ ಮಾಡಲು ಸಾಧ್ಯವಾಗದಿದ್ದರೆ
ಸುಮ್ಮನಿರುವುದನ್ನಾದರೂ ಮಾಡಿರಿ. ಗುರುವಿನಿಂದ ಅಜ್ಞಾನ ದೂರವಾಗಿ ಸುಜ್ಞಾನ ಪ್ರಾಪ್ತವಾಗುತ್ತದೆ ಎಂದರು. ಮಾಜಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ ವೀರಶೈವ ಧರ್ಮದ ಪಂಚ ಪೀಠಗಳು ಮಾನವ ಧರ್ಮಕ್ಕೆ
ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರುತ್ತಾ ಬಂದಿವೆ. ಧರ್ಮ ಮತ್ತು ಜಾತಿಗಳ ಮಧ್ಯೆ
ನಡೆಯುತ್ತಿರುವ ಸಂಘರ್ಷ ನಿಲ ್ಲಲು ಧರ್ಮ ಪೀಠಗಳ ಮಾರ್ಗದರ್ಶನದ ಅವಶ್ಯಕತೆ ಇದೆ. ನವಲಗುಂದ ಪಂಚಗೃಹ
ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯರು ಜಗದ್ಗುರುಗಳೈವರ ಸಾನ್ನಿಧ್ಯದಲ್ಲಿ ನೂತನ ಶ್ರೀಗಳಿಗೆ ಗುರುತ್ವಾಧಿಕಾರ
ಅನುಗ್ರಹಿಸುತ್ತಿರುವುದು ಸಂತೋಷದ ಸಂಗತಿ ಎಂದರು.

ನೇತೃತ್ವ ವಹಿಸಿದ ಪಂಚಗೃಹ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ನಮ್ಮ
ಪಟ್ಟಾಧಿಕಾರಕ್ಕೂ ೫ ಜನ ಜಗದ್ಗುರುಗಳು ದಯಮಾಡಿಸಿ ಆಶೀರ್ವದಿಸಿದ್ದರು. ಇಂದು ಮತ್ತೆ ನಮ್ಮ ಮಠದ ಪಟ್ಟಾಧಿಕಾರ
ಸಮಾರಂಭಕ್ಕೆ ೫ ಜನ ಜಗದ್ಗುರುಗಳು ದಯಮಾಡಿಸಿಸಿರುವುದು ಮತ್ತೊಂದು ದಾಖಲೆ. ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರ
ಆಶೀರ್ವಾದ ನಮ್ಮ ನಿಮ್ಮೆಲ ್ಲರ ಮೇಲಿರಲೆಂದು ಪ್ರಾರ್ಥಿಸಿದರು. ಸಮಾರಂಭದಲ್ಲಿ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು, ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು, ನವನಗರದ ರಾಜಶೇಖರ
ಶಿವಾಚಾರ್ಯರು, ನರಗುಂದ ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು, ಅಡ್ನೂರ ಅಭಿನವ ಪಂಚಾಕ್ಷರ
ಶಿವಾಚಾರ್ಯರು, ಕುಂದಗೋಳದ ಬಸವಣ್ಣಜ್ಜನವರು ಕಲ್ಯಾಣಪುರ, ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಸ್ವಾಮಿಗಳು
ಸೇರಿದಂದತೆ ಹಲವಾರು ಮಠಾಧೀಶರು ಪಾಲ್ಗೊಂಡಿದ್ದರು. ಖ್ಯಾತ ಸಂಶೋಧಕ ಡಾ|| ಅಡಿವೆಪ್ಪ ವಾಲಿಯವರು ನುಡಿ
ನಮನ ಸಲ್ಲಿಸಿದರು. ವೀರೇಶ ಕಿತ್ತೂರ ಸಂಗಡಿಗರಿ0ದ ಸಂಗೀತ ಜರುಗಿತು.
ಸಮಾರಂಭಕ್ಕೂ ಮುನ್ನ ನವಲಗುಂದ ರಾಜ ಬೀದಿಯಲ್ಲಿ ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿAದ ಜರುಗಿತು.