38
ಚೈತನ್ಯ ನ್ಯೂಸ್ 24 ಕನಕಗಿರಿ ಜೂ.19:
ಗ್ಯಾರಂಟಿ ಯೋಜನೆಗಳು ಚುನಾವಣಾ ಪೂರ್ವದಲ್ಲಿ ಎಲ್ಲರ ಗಮನ ಸೆಳೆದಿದ್ದವು. ಅದರ ಪರಿಣಾಮವಾಗಿ ಕಾಂಗ್ರೆಸ್ ಪಕ್ಷದ ಸರ್ಕಾರ ಪ್ರಚಂಡ ಬಹುಮತದಿಂದ ಗೆದ್ದಿತು. ಯೋಜನೆಗಳ ಅನುಷ್ಠಾನ ಕೈಕೊಂಡಾಗ ರಾಜ್ಯದ ಬೊಕ್ಕಸಕ್ಕೆ ಬಹಳಷ್ಟು ಪೆಟ್ಟು ಬಿತ್ತು. ಇದೀಗ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವ ನಿರ್ಧಾರ ಕೈಗೊಂಡಿರುವುದು ಉತ್ತಮವಾದ ಬೆಳವಣಿಗೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ತಮ್ಮನ್ನು ಭೇಟಿಯಾದ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಬೇರೆ ಬೇರೆ ಮೂಲದಿಂದ ಜನರಿಂದ ಹೆಚ್ಚಿನ ತೆರಿಗೆ ಹಾಕಿ ಜನ ಸಾಮಾನ್ಯರಿಗೆ ಬಹಳಷ್ಟು ತೊಂದರೆಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಗ್ಯಾರಂಟಿ ಯೋಜನೆಯಿಂದ ಕೆಲವರಿಗೆ ಒಳ್ಳೆಯದಾದರೂ ಬಹಳಷ್ಟು ಜನರಿಗೆ ತೊಂದರೆಯಾಗಿದ್ದು ಸತ್ಯ. ಮೃತ ವ್ಯಕ್ತಿಗಳಿಗೂ ಹಣ ಹೋಗುತ್ತಿರುವುದು ಸೇರಿದಂತೆ ಹಲವಾರು ವಿಷಯಗಳಲ್ಲಿ ಹಣ ಪೋಲಾಗುತ್ತಿರುವುದನ್ನು ತಪ್ಪಿಸಲು ಇದೀಗ ಗ್ಯಾರಂಟಿ ಪರಿಷ್ಕರಣೆಗೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಮುಂದಾಗಿರುವುದು ಒಳ್ಳೆಯ ನಿರ್ಧಾರವಾಗಿದೆ. ಅರ್ಹರಿಗೆ ಮಾತ್ರ ಇದರ ಲಾಭ ತಟ್ಟಬೇಕೇ ಹೊರತು ಅನರ್ಹರಿಗಲ್ಲ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಹಣ ತೊಡಗಿಸಿ ಕಾರ್ಯ ಪ್ರವೃತ್ತರಾಗುವುದು ಒಳಿತು. ರಾಜ್ಯದಲ್ಲಿ ಮಾಡಬೇಕಾದ ಸಾಕಷ್ಟು ಕೆಲಸಗಳಿರುವಾಗ ಜಾತಿ-ಧರ್ಮಗಳ ಸಂಘರ್ಷಕ್ಕೆ ಅವಕಾಶ ಕೊಡದೇ ಎಲ್ಲಾ ಸಮುದಾಯಗಳ ಹಿತ ಕಾಪಾಡುವ ನಿಟ್ಟಿನಲ್ಲಿ ಮುಖ್ಯ ಮಂತ್ರಿಗಳು ಗಟ್ಟಿ ನಿರ್ಧಾರ ತೆಗೆದುಕೊಳ್ಳುವರೆಂಬ ಆತ್ಮ ವಿಶ್ವಾಸ ತಮಗಿದೆ ಎಂದರು.