ಚೈತನ್ಯ ನ್ಯೂಸ್ 24 ಯಲಬುರ್ಗಾ: ಮೇ.16:
ಕ್ಷೇತ್ರದಲ್ಲಿ ಎಲ್‌ಕೆಜಿಯಿಂದ ಪಿಜಿವರೆಗೂ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಶಾಸಕ ಬಸವರಾಜ ರಾಯರಡ್ಡಿ ಮಂಜೂರುಗೊಳಿಸಿದ್ದು, ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕು ಎಂದು ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಧೀರ ಕೊರ್ಲಳ್ಳಿ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಯಲಬುರ್ಗಾ ನಲ್ಲಿ ಶುಕ್ರವಾರ ನಡೆದ 2025-26ನೇ ಶೈಕ್ಷಣಿಕ ಸಾಲಿನ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಶಿಕ್ಷಣದ ನಂತರ ವಿದ್ಯಾರ್ಥಿಗಳು ಉನ್ನತ ಶಿಕ್ಷಣದತ್ತ ಹೆಜ್ಜೆಯಿಡಬೇಕು. ರಾಜ್ಯ ಸರ್ಕಾರ ಯುವಕರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ‘ಯುವ ನಿಧಿ’ ಸೇರಿದಂತೆ ವಿವಿಧ ಯೋಜನೆಗಳ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು. ಯಲಬುರ್ಗಾ ಕಾಲೇಜು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಬೆಳಕಾಗಿದ್ದು, ಇಲ್ಲಿ ಅಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ಉತ್ತಮ ಹುದ್ದೆಗಳನ್ನು ಪಡೆದು ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ನಿವೃತ್ತ ಉಪನಿರ್ದೇಶಕ ಎಸ್.ಡಿ. ಗಾಂಜಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಶಿಸ್ತು, ಸಂಸ್ಕಾರ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆ ಅಡಗಿದ್ದು, ನಿರಂತರ ಪರಿಶ್ರಮದಿಂದ ದೊಡ್ಡ ಮಟ್ಟದ ಸಾಧನೆ ಸಾಧ್ಯ ಎಂದರು.
ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಉಪನ್ಯಾಸ ನೀಡಿ, ಶಿಕ್ಷಣ ಜೀವನದ ದಿಕ್ಕು ತೋರಿಸುವ ಶಕ್ತಿಯಾಗಿದ್ದು, ವಿದ್ಯಾರ್ಥಿಗಳು ಗುರಿ ಹೊಂದಿ ಮುನ್ನಡೆಯಬೇಕು ಎಂದು ಪ್ರೇರಣಾದಾಯಕ ಮಾತುಗಳನ್ನಾಡಿದರು.
ಕಾಲೇಜಿನ ಪ್ರಾಚಾರ್ಯ ಕೆ.ಎಚ್. ಛತ್ರದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಿಡಿಸಿ ಸದಸ್ಯರಾದ ಕಳಕಪ್ಪ ಕುರಿ, ಜಯಶ್ರೀ ಕಂದಕೂರು, ವಿರುಪಾಕ್ಷಯ್ಯ ಗಂಧದ, ಬಸವರಾಜ ಇಳಿಗೇರ, ಬಸವರಾಜ ಒಂಟೇಲಿ, ವಿಕಾಸ ಉಳ್ಳಾಗಡ್ಡಿ, ರಹೆಮಾನಸಾಬ ನಾಯಕ, ಕಳಕೇಶ ಸೂಡಿ, ಮಹಾಂತೇಶ ಚಲವಾದಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಎ.ಬಿ. ಕೆಂಚರಡ್ಡಿ, ಡಾ. ಸುರೇಶಕುಮಾರ, ಡಾ. ನಂದಾ, ಶಂಕ್ರಯ್ಯ, ಡಾ. ಶಶಿಕುಮಾರ, ಮಂಜುಳಾ ಮಡಿವಾಳರ, ವಿನೋದ ಸಿದ್ದಣ್ಣನವರ, ಹನಿಮೇಶ, ಲಕ್ಷ್ಮೀಬಾಯಿ, ವಂಶಿಕೃಷ್ಣ, ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.