ಚೈತನ್ಯ ನ್ಯೂಸ್ 24 ನರೇಗಲ್ಲ ಮೇ.22:
ನರೇಗಲ್ಲ ಮೇ.೨೨: ಸಮೀಪದ ನಿಡಗುಂದಿ ಗ್ರಾಮದ ಶ್ರೀ ಗಜಾನನ ದೇವಸ್ಥಾನದ ಆವರಣದಲ್ಲಿ ಮೇ ೨೩ರ ಶನಿವಾರ ಸಂಜೆ ೬ ಗಂಟೆಗೆ ಶ್ರೀ ಕುಮಾರೇಶ್ವರ ಬಿಲ್ವ ಪತ್ರೆ ವನದ ವತಿಯಿಂದ “ಶಿವಾನುಭವ ಸಂಪದ-24” ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶಾಖಾ ಶಿವಯೋಗ ಮಂದಿರ ನಿಡಗುಂದಿ ಕೊಪ್ಪದ ಪರಮ ಪೂಜ್ಯ ಶ್ರೀ ಮ.ನಿ.ಪ್ರ. ಅಭಿನವ ಚನ್ನಬಸವ ಮಹಾಸ್ವಾಮಿಗಳವರ ದಿವ್ಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇಟಗಿ-ನಿಡಗುಂದಿ ಧರ್ಮರ ಮಠದ ಪೂಜ್ಯ ಷಣ್ಮುಖಪ್ಪಜ್ಜನವರು ಸಾನ್ನಿಧ್ಯ ವಹಿಸಲಿದ್ದಾರೆ.
ಗಜೇಂದ್ರಗಡ ತಾಲೂಕು ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಪ್ರಭು ನಿಂಗಪ್ಪ ಚವಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಹಿರೇಕೊಪ್ಪದ ಬಸಯ್ಯಶಾಸ್ತ್ರಿ ಹಿರೇಮಠ ಅವರು “ಕಡಗೀಲಲ್ಲದ ಬಂಡಿ ಹೊಡೆಗೆಡೆಯದೆ ಮಾಳ್ಬದೆ” ವಚನ ಚಿಂತನ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ನಿಡಗುಂದಿಯ ಗಜಾನನ ಯುವಕ ಸಂಘದ ವತಿಯಿಂದ ದಾಸೋಹ ಸೇವೆ ನಡೆಯಲಿದ್ದು, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಬಸವರಾಜ ಶ. ಜಂಗಣ್ಣವರ ಹಾಗೂ ಶರಣಪ್ಪ ಅಂ. ಅರಮನಿ ಸಂಗೀತ ಸೇವೆ ನೀಡಲಿದ್ದು, ಅಕ್ಕಮಹಾದೇವಿ ಮಹಿಳಾ ವೇದಿಕೆಯವರು ಪ್ರಾರ್ಥನಾ ಗೀತೆ ಮತ್ತು ಶ್ರೀ ಕುಮಾರೇಶ್ವರ ನಾಮಾವಳಿ ಪಠಣ ನಡೆಸಿಕೊಡಲಿದ್ದಾರೆ.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಎ. ಎಸ್. ಗೆದಿಗೇರಿ ಹಾಗೂ ಡಿ.ಎಸ್. ಬಡಿಗೇರ ನಿರ್ವಹಿಸಲಿದ್ದು, ಸುತ್ತಮುತ್ತಲಿನ ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀಗಳವರ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.