ಚೈತನ್ಯ ನ್ಯೂಸ್ 24 ಹುಬ್ಬಳ್ಳಿ ಜೂ.9:
ಭಾರತೀಯ ವೈದ್ಯಕೀಯ ಪರಂಪರೆಯಲ್ಲಿ ಆಯುರ್ವೇದ ಗಿಡಮೂಲಿಕೆಗಳಿಗೆ ಬಹಳಷ್ಟು ಮಹತ್ವವಿದೆ. ಪೂರ್ವಕಾಲದ ಋಷಿ ಮುನಿಗಳು ಗಿಡಮೂಲಿಕೆಗಳಲ್ಲಿರುವ ರೋಗ ನೀರೋಧಕ ಶಕ್ತಿಯನ್ನು ಗುರುತಿಸಿ ಅಪೂರ್ವ ಕೊಡುಗೆ ಕೊಟ್ಟಿದ್ದಾರೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ವಿದ್ಯಾನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದಲ್ಲಿ ಅಸ್ತಮಾ ಕೆಮ್ಮು ಅಲರ್ಜಿ ರೋಗಗಳಿಗೆ ಉಚಿತ ಔಷಧ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಎಲ್ಲ ಸಂಪತ್ತುಗಳಿಗಿ0ತ ಆರೋಗ್ಯ ಸಂಪತ್ತು ದೊಡ್ಡದು. ಆರೋಗ್ಯ ಬಯಸುವ ಮನುಷ್ಯ ಆರೋಗ್ಯ ಸೂತ್ರಗಳನ್ನು ಪರಿಪಾಲಿಸಬೇಕಾಗಿದೆ. ಹಣ ಸಂಪಾದಿಸುವ ಮನುಷ್ಯ ಆರೋಗ್ಯ ನಿರ್ಲಕ್ಷಿಸುತ್ತಾನೆ. ಆರೋಗ್ಯ ಹದಗೆಟ್ಟಾಗ ಸಂಪಾದಿಸಿದ ಹಣ ಖರ್ಚು ಮಾಡಿದರೂ ಆರೋಗ್ಯ ಮರಳಿ ಬರಲಾರದು. ಮಾತು ಬಲ್ಲವನಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗ ಇಲ್ಲವೆಂಬ ಗಾದೆ ಮಾತು ಜನಜನಿತವಾಗಿದೆ. ಡಾ|| ಸುರೇಶ ಮೆಣಸಗಿಯವರು ಪರಂಪರೆಯಿAದ ಬಂದ ಆಯುರ್ವೇದ ಗಿಡ ಮೂಲಿಕೆ ಔಷಧಗಳ ಮೂಲಕ ಅಸ್ತಮಾ ಕೆಮ್ಮು ಅಲರ್ಜಿ ರೋಗಗಳಿಗೆ ಉಚಿತ ಔಷಧ ವಿತರಿಸಲಿರುವುದು ಅವರಲ್ಲಿರುವ ಸಾಮಾಜಿಕ ಕಾಳಜಿಯನ್ನು ಕಾಣಬಹುದಾಗಿದೆ. ಶ್ರೀ ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಅವರ ನಿರಂತರ ಶ್ರಮ ಮತ್ತು ಜನ ಹಿತಾತ್ಮಕ ಕಾರ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ ಎಂದರು.
ಸಮಾರಂಭ ಉದ್ಘಾಟಿಸಿದ ಬೆಂಗಳೂರು ಅಪೋಲೋ ಆಸ್ಪತ್ರೆಯ ಡಾ|| ದಯಾನಂದ ಯಲಿಗಾರ ಮಾತನಾಡಿ ಇಂದು ಎಲ್ಲರಿಗೂ ತಮ್ಮ ಆರೋಗ್ಯ ಸಂರಕ್ಷಣೆಯ ಬಗೆಗೆ ಗಮನ ಬರುತ್ತಿರುವುದು ಸಮಾಧಾನದ ಸಂಗತಿ. ಹಿತ ಮಿತವಾದ ಸಾತ್ವಿಕ ಆಹಾರ, ವ್ಯಾಯಾಮಗಳ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ ಎಂದರು. ಧನ್ವಂತರಿ ಸೇವಾ ಸಂಸ್ಥೆಯ ಡಾ|| ಸುರೇಶ ಮೆಣಸಗಿಯವರು ಮಾತನಾಡಿ ಪ್ರತಿಯೊಂದು ಗಿಡಮೂಲಿಕೆಗಳಲ್ಲಿ ಒಂದಿಲ್ಲ ಒಂದು ಶಕ್ತಿ ಇರುತ್ತದೆ. ಅದನ್ನು ಅರಿತು ಬಳಸಿದ್ದಾದರೆ ಉತ್ತಮ ಆರೋಗ್ಯ ಸಂಪಾದಿಸಿಕೊಳ್ಳಬಹುದು. ಪೂರ್ವಕಾಲದ ಋಷಿ ಮುನಿಗಳು ಬರೆದಿಟ್ಟ ಆಯುರ್ವೇದ ಗಿಡಮೂಲಿಕೆಗಳ ಜ್ಞಾನ ಸಂಪತ್ತು ಬಳಸಿದಷ್ಟು ಬೆಳೆಯುತ್ತದೆ. ಹಿಂದಿನ ಹಿರಿಯರು ಮನೆ ಮದ್ದು ಬಳಸಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಕೆಮ್ಮು ದಮ್ಮು ಅಲರ್ಜಿ ರೋಗಗಳಿಗೆ ಈ ಔಷಧ ಜೀವ ಸಂಜೀವಿನಿಯಾಗಿದೆ ಎಂದರು. ನಿವೃತ್ತ ಹೆಸ್ಕಾಂ ತಾಂತ್ರಿಕ ನಿರ್ದೇಶಕ ಎಸ್.ಜಗದೀಶ, ಮಹಾನಗರ ಪಾಲಿಕೆ ಇಂಜನೀಯರ್ ಗವಿಸಿದ್ಧಯ್ಯ ಹಿರೇಮಠ, ಪಾರ್ವತಿ ಮಹಿಳಾ ಅಭಿವೃದ್ಧಿ ಮಂಡಳದ ಅಧ್ಯಕ್ಷೆ ಶ್ರೀಮತಿ ಇಂಧುಮತಿ ಮಾನ್ವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಶಿವು ಹಿರೇಮಠರಿಂದ ಪ್ರಾರ್ಥನೆ ಜರುಗಿತು. ಬೆಳವಡಿಯ ಜಿ.ವಿ.ಹಿರೇಮಠ ನಿರೂಪಿಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು. ಡಾ|| ಸುರೇಶ ಮೆಣಸಗಿಯವರು ಸುಮಾರು ೩೫೦ ಜನರಿಗೆ ಉಚಿತವಾಗಿ ಕೆಮ್ಮು ದಮ್ಮು ಅಸ್ತಮಾ ಔಷಧವನ್ನು ವಿತರಿಸಿದರು