ಚೈತನ್ಯ ನ್ಯೂಸ್ 24 ಗಜೇಂದ್ರಗಡ: ಜೂ.9:
ರಸಗೊಬ್ಬರ ಮಾರಾಟಗಾರರು ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು. ಅಲ್ಲದೇ ನಿಗದಿಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರಗಳನ್ನು ಮಾರಾಟ ಮಾಡಿದರೆ ಅಂತಹವರ ಲೈಸನ್ಸ್ ರದ್ದು ಪಡಿಸಲಾಗುವುದು ಎಂದು ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಹೇಳಿದರು.
ಪಟ್ಟಣದದ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನ ಖಾಸಗಿ ಹಾಗೂ ಸಹಕಾರಿ ಸಂಘಗಳ ರಸಗೊಬ್ಬರ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ದರ ಪಟ್ಟಿ ನಿಗದಿ, ರಸಗೊಬ್ಬರ ದಸ್ತಾನು ಸಂಗ್ರಹಣೆ, ಮಾರಾಟದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಂಗಡಿಯಲ್ಲಿ ಅಳವಡಿಸಬೇಕು. ಯಾವುದೇ ರಸಗೊಬ್ಬರ ಮಾರಾಟ ಮಾಡಿದರೆ ರೈತರಿಗೆ ಜಿಎಸ್.ಟಿ ಬಿಲ್ ಗಳನ್ನು ನೀಡಬೇಕು. ಬಿಳಿಯ ಆಳೆಯ ಮೇಲೆ ಬಿಲ್ ಬರೆದುಕೊಡಬಾರದು ಎಂದು ತಿಳಿಸಿದರು.

ಅಂಗಡಿಯಲ್ಲಿ ರಸಗೊಬ್ಬರ ಸಂಗ್ರಹಣೆ ಇಟ್ಟುಕೊಂಡು ಗೊಬ್ಬರ ಇಲ್ಲವೆಂದು ರೈತರಿಗೆ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ರೈತರಿಗೆ ಅನುಕೂಲವಾಗುವಂತೆ ರಸಗೊಬ್ಬರ ಮಾರಾಟ ಮಾಡಿ. ಅಂಗಡಿಕಾರರು ಸರಿಯಾಗಿ ನಿರ್ವಹಣೆ ಮಾಡಿದರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ. ರಸಗೊಬ್ಬರ ಇದ್ದು ಇಲ್ಲವೆಂದು ಹೇಳಿ ಕಳಿಸಿದರೆ ರೈತರು ಹೋರಾಟ ಸೇರಿ ಪ್ರತಿಭಟನೆ ನಡೆಸಲು ಪ್ರಾರಂಭಿಸುತ್ತಾರೆ ಅಂತಹ ಸಮಯದಲ್ಲಿ ನಾವು ಕೂಡಾ ರೈತರ ಪರವಾಗಿ ನಿಂತ್ತು ಕೆಲಸ ಮಾಡಬೇಕಾಗುತ್ತದೆ. ಕೃತಕ ಅಭಾಗ ಸೃಷ್ಠಿಯಾಗಬಾರದು. ಆ ನಿಟ್ಟಿನಲ್ಲಿ ಅಂಗಡಿಕಾರರು ಕೆಲಸ ಮಾಡಬೇಕು ಎಂದು ಮಾರಾಟಗಾರರಿಗೆ ಕಿವಿಮಾತು ಹೇಳಿದರು.
ತಾಲೂಕಿನ ಎಲ್ಲಾ ಅಂಗಡಿಗಳಿಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ನಾನು (ತಹಶೀಲ್ದಾರ್) ಯಾವ ಸಮಯದಲ್ಲಿಯಾದರೂ ಅಂಗಡಿಗಳನ್ನು ಪರಿಶೀಲನೆ ಮಾಡಬಹುದು. ಪರಿಶೀಲನೆ ವೇಳೇ ಏನಾದರೂ ದೋಷ ಕಂಡು ಬಂದರೆ ಅಂಗಡಿಯ ಲೇಷನ್ಸ್ ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರು ಗೊಬ್ಬರ ಕೊಡುವ ತನಕ ತಡೆದುಕೊಳ್ಳಲ್ಲ. ಗಲಾಟೆ ಮಾಡಿ ಸಮಸ್ಯೆ ಉದ್ಬವಿಸುತ್ತಾರೆ ಎಂದು ಮಾರಾಟಗಾರರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ತಹಶೀಲ್ದಾರರು ಮಾತನಾಡಿ, ನಿಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲವೆಂದರೆ ಎದುರುವ ಅವಶ್ಯಕತೆ ಇಲ್ಲ. ಪ್ರತಿ ಅಂಗಡಿಕಾರರು ಅಂಗಡಿಯ ಮುಂದೆ ಸಿಸಿ ಕ್ಯಾಮರಾ ಅಳವಡಿಸಿ ಯಾರು ತಪ್ಪಿತಸ್ಥರು ಅವರ ವಿರುದ್ಧ ಕ್ರಮವಹಿಸೋಣ ಎಂದರು.
ಯೂರಿಯಾ ಅಭಾವ ಭಯಬೇಡ: ಯೂರಿಯಾ ಗೊಬ್ಬರ ಕೊರತೆ ಹೋಗಲಾಡಿಸಲು ನ್ಯಾನೋ ಯೂರಿಯಾ, ನ್ಯಾನ್ಯೋ ಡಿಎಪಿ, ನಮೋನಿಯಾ ಸೇಲ್ಪೆಟ್ ಗೊಬ್ಬರ ಸಿಗುತ್ತದೆ ಅದನ್ನು ಬಳಕೆ ಮಾಡಲು ರೈತರಿಗೆ ತಿಳಿಸಿದರು. ಯೂರಿಯಾ ಗೊಬ್ಬರ ಮಣ್ಣಲ್ಲಿ ಹಾಕುತ್ತಾರೆ ನ್ಯಾನೋ ಯೂರಿಯಾ ಬೆಳೆಗೆ ಸಿಂಪರಣೆ ಮಾಡುತ್ತಾರೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ಸಹಾಐಕ ನಿರ್ದೇಶಕರಾದ ಬಸವರಾಜ ಮಳೆದ ಮಾತನಾಡಿ, ನ್ಯಾನೋ ಯೂರಿಯಾ ಎನ್ನುವುದು ಸಸ್ಯಗಳಿಗೆ ಸಾರಜನಕವನ್ನು ಒದಗಿಸುವ ನ್ಯಾನೊ ತಂತ್ರಜ್ಞಾನ ಆಧಾರಿತ ದ್ರವರೂಪದ ರಸಗೊಬ್ಬರವಾಗಿದೆ. ಸಾಂಪ್ರದಾಯಿಕ ಹರಳಿನ ಯೂರಿಯಾಕ್ಕೆ ಹೋಲಿಸಿದರೆ ಇದು ಅತ್ಯಂತ ಪರಿಣಾಮಕಾರಿ, ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದಾಯಕವಾಗಿದೆ. ಒಂದು ಎಕರೆ ಜಮೀನಿಗೆ ಕೇವಲ 500 ಮಿ.ಲೀ ಬಾಟಲಿ ಸಾಕಾಗುತ್ತದೆ ಎಂದು ತಿಳಿಸಿದರು.
ಸರ್ವರ ಸಮಸ್ಯೆ ಇದೆ ಅಂತ ಮಧ್ಯಾಹ್ನ 2 ಗಂಟೆಗೆ ಬಂದ್ ಮಾಡುತ್ತಾರೆ ಎಂದು ರೈತರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ತಾ.ಪಂ. ಇಒ ಅವರು ಜನಸಂದಣಿ, ಮೊಡಕವಿದ ವಾತಾವರಣ ಇದ್ದಾಗ ಸರ್ವರ ಸಮಸ್ಯೆ ಬರುತ್ತದೆ ಆ ಸಮಯದಲ್ಲಿ ರೈತರು ಸಹಕಾರ ನೀಡಬೇಕು. ಉಳಿದಂತೆ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ರೈತರಿಗೆ ತಿಳಿಸಿದರು.
ಕೃಷಿ ಅಧಿಕಾರಿ ಬಸವರಾಜ ಗದಗಿನ ಪ್ರಸ್ತಾವಿಕವಾಗಿ ಮಾತನಾಡಿ, ಮಣ್ಣಿನ ಸಂರಕ್ಷಣೆ, ಫಲವತ್ತೆತ್ತೆ ಕಾಪಾಡಿಕೊಳ್ಳಬೇಕು. ಅತಿ ಹೆಚ್ಚಿ ರಾಸಾಯನಿಕ ಗೊಬ್ಬರ ಬಳಕೆ ಮಾಡದೇ ತಿಪ್ಪೆ ಗೊಬ್ಬರ ಸಾವಯವ ಗೊಬ್ಬರ ಬಳಕೆ ಮಾಡಬೇಕು. ಖೇತ್ ಬಚಾವೋ ಆಂದೋಲನ ಕುರಿತು ಮಾಹಿತ ನೀಡಿದರು.
ಈ ಸಂದರ್ಭದಲ್ಲಿ ಕೃಷಿಕ ಸಮಾಜದ ತಾಲೂಕ ಉಪಾಧ್ಯಕ್ಷ ಮುದಕಪ್ಪ ಬೇಟಗೇರಿ, ತಾಲೂಕಿನ ರೈತರ ಮುಖಂಡರು, ಖಾಸಗಿ ಹಾಗೂ ಸಹಕಾರಿ ಸಂಘಗಳ ರಸಗೊಬ್ಬರ ಮಾರಾಟಗಾರರು ಹಾಜರಿದ್ದರು. ಕೃಷಿ ಅಧಿಕಾರಿ ಬಸವರಾಜ ಗದಗಿನ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.