ಚೈತನ್ಯ ನ್ಯೂಸ್ 24 ಗದಗ ಜೂ.10:
ವಿಶೆಷ ವರದಿ: ಎಸ್ ವಿ ಸಂಕನಗೌಡ್ರ
ಕರ್ನಾಟಕದ ಪ್ರಗತಿಪರ ಹಾಗೂ ಸಾಮಾಜಿಕ ಚಳುವಳಿಗಳ ತಾಯಿ ಬೇರು, ದಲಿತ ಸಂಘರ್ಷ ಸಮಿತಿಯ (ಡಿ.ಎಸ್.ಎಸ್) ಸ್ಥಾಪಕರು ಹಾಗೂ ಕ್ರಾಂತಿಕಾರಿ ಹೋರಾಟಗಾರರಾದ ಪ್ರೊ. ಬಿ. ಕೃಷ್ಣಪ್ಪನವರ 89ನೇ ಜನ್ಮದಿನಾಚರಣೆಯನ್ನು ಗದಗ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ವತಿಯಿಂದ ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜನ್ಮದಿನಾಚರಣೆಯ ಅಂಗವಾಗಿ ಬೆಟಗೇರಿಯ ಮಂಜು ಶಿಕ್ಷಣ ಸಂಸ್ಥೆಯ ವಿಶೇಷ ಮಕ್ಕಳ ವಸತಿ ಶಾಲೆ’ಯಲ್ಲಿ ವಿಶೇಷ ಮಕ್ಕಳಿಗೆ ಹಣ್ಣು-ಹಂಪಲು, ಹಾಲು ಹಾಗೂ ಬ್ರೆಡ್ ವಿತರಿಸುವ ಮೂಲಕ ಮಾನವೀಯತೆ ಮೆರೆಯಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಪ್ರೊ. ಬಿ. ಕೃಷ್ಣಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಡಿ.ಎಸ್.ಎಸ್ ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ಎಸ್. ಎನ್. ಬಳ್ಳಾರಿ ಅವರು ಮಾತನಾಡಿ, ಕರ್ನಾಟಕದಲ್ಲಿ ಶೋಷಿತರ, ದಲಿತರ ಧ್ವನಿಯಾಗಿ ಪ್ರೊ. ಬಿ. ಕೃಷ್ಣಪ್ಪನವರು ಕಟ್ಟಿದ ಚಳುವಳಿ ಇಂದಿಗೂ ನಮಗೆಲ್ಲ ದಾರಿದೀಪವಾಗಿದೆ. ಅವರ ಜನ್ಮದಿನವನ್ನು ಈ ರೀತಿ ವಿಶೇಷ ಮಕ್ಕಳೊಂದಿಗೆ ಆಚರಿಸಿ, ಅವರಲ್ಲಿ ಸಂತೋಷ ಮೂಡಿಸುತ್ತಿರುವುದು ಪ್ರೊಫೆಸರರ ಆಶಯಗಳಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿ.ಎಸ್.ಎಸ್ ಬೆಳಗಾವಿ ವಿಭಾಗೀಯ ಸಂಚಾಲಕರಾದ ಪ್ರಕಾಶ್ ಹೊಸಳ್ಳಿ, ಗದಗ ಜಿಲ್ಲಾ ಸಂಚಾಲಕರಾದ ದುರಗಪ್ಪ ಎಲ್. ಹರಿಜನ (ಎಚ್), ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ಮಂಜುನಾಥ್ ಬುರುಡಿ ಹಾಗೂ ಸಂಗಪ್ಪ ಹೊಸಮನಿ, ಸತೀಶ್ ಹೂಲಿ, ಕೃಷ್ಣ ಪೂಜಾರ್, ಹನುಮಂತ್ ಪೂಜಾರ್, ರಮೇಶ್ ಕಡೆಮನಿ ಉಪಸ್ಥಿತರಿದ್ದರು.
ಇವರೊಂದಿಗೆ ಗಜೇಂದ್ರಗಡ ತಾಲೂಕು ಸಂಚಾಲಕರಾದ ರವಿ ಮಾದರ, ಗಜೇಂದ್ರಗಡ ಸಂಘಟನಾ ಸಂಚಾಲಕರಾದ ಶರಣು ಆರ್. ದೊಡ್ಡಮನಿ ಸೇರಿದಂತೆ ಸಂಘಟನೆಯ ಹಿರಿಯ ಮುಖಂಡರು, ಮಂಜು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಬಾಕ್ಸ್…..
“ಡಿ.ಎಸ್.ಎಸ್ ಗದಗ ಜಿಲ್ಲಾ ಸಂಚಾಲಕರಾದ ದುರಗಪ್ಪ ಎಲ್. ಹರಿಜನ ಅವರು ಮಾತನಾಡಿ, ‘ಪ್ರೊ. ಬಿ. ಕೃಷ್ಣಪ್ಪನವರು ತೋರಿದ ಹಾದಿ ಹಾಗೂ ಅವರ ಆಶಯಗಳು ನಮಗೆಲ್ಲರಿಗೂ ದಾರಿದೀಪ. ಅವುಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಪಾಲಿಸಬೇಕು’ ಎಂದು ಕರೆ ನೀಡಿದರು. ಮುಂದುವರಿದು, ಸಮಾಜದಲ್ಲಿ ಹಿಂದುಳಿದಿರುವ ವಿಶೇಷ ಮಕ್ಕಳ ಮುಖದಲ್ಲಿ ಸಂತಸ ಮೂಡಿಸುವ ಮೂಲಕ ಪ್ರೊಫೆಸರರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಇದು ನಮ್ಮ ಸಂಘಟನೆಗೆ ದೊರೆತ ಬಹುದೊಡ್ಡ ಹೆಮ್ಮೆ ಎಂದು ಅವರು ಭಾವನಾತ್ಮಕವಾಗಿ ನುಡಿದರು.”
ವರದಿ.ಎಸ್ ವಿ ಸಂಕನಗೌಡ್ರ ಜಿಲ್ಲಾ ವರದಿಗಾರರು ಗದಗ