Home ಜಿಲ್ಲಾ ಸುದ್ದಿಗಳುರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ

ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ

ಸಚಿವ ಸ್ಥಾನ ನೀಡಲೆಂದು ದೀಡ ನಮಸ್ಕಾರ ಹಾಕಿದ ಹಾಲಕೆರೆ ಕಾಂಗ್ರೆಸ್ ಕಾರ್ಯಕರ್ತರು

by Editor
0 comments

ಚೈತನ್ಯ ನ್ಯೂಸ್‌ 24 ನರೇಗಲ್ಲ ಜೂ.12:

 

ರೋಣ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯಬೇಕು ಎಂಬ ಆಶಯದೊಂದಿಗೆ ಹಾಲಕೆರೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿ ದೀಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದರು. ಗ್ರಾಮದಲ್ಲಿ ನಡೆದ ಈ ಧಾರ್ಮಿಕ ಹಾಗೂ ರಾಜಕೀಯ ಸಂಕಲ್ಪದ ಕಾರ್ಯಕ್ರಮ ಗಮನ ಸೆಳೆಯಿತು.
ಗ್ರಾಮದ ಪಾದಗಟ್ಟಿಯ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ಆರತಿ ನೆರವೇರಿಸಿದ ಬಳಿಕ ಕಾರ್ಯಕರ್ತರು ಅಲ್ಲಿಂದ ಅನ್ನದಾನೇಶ್ವರ ದೇವಸ್ಥಾನದವರೆಗೆ ದೀಡ ನಮಸ್ಕಾರ ಹಾಕುತ್ತಾ ಭಕ್ತಿಭಾವದಿಂದ ಸಾಗಿದರು. ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ದೊರೆತು ರೋಣ ಮತಕ್ಷೇತ್ರಕ್ಕೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಬರಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಾಲಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎ.ಸಿ. ಪಾಟೀಲ, “ಜಿ.ಎಸ್. ಪಾಟೀಲರು ಯಾವುದೇ ಒಂದು ಸಮಾಜಕ್ಕೆ ಸೀಮಿತವಾದ ನಾಯಕರಲ್ಲ. ಸರ್ವ ಸಮಾಜಗಳ ವಿಶ್ವಾಸ ಗಳಿಸಿರುವ ಅವರು ಜಾತ್ಯತೀತ ಮೌಲ್ಯಗಳ ಆಧಾರದ ಮೇಲೆ ರಾಜಕೀಯ ಜೀವನ ನಡೆಸುತ್ತಿದ್ದಾರೆ. ಅಭಿವೃದ್ಧಿ ಪರ ಚಿಂತನೆ, ಸರಳ ವ್ಯಕ್ತಿತ್ವ ಮತ್ತು ಜನಪರ ಆಡಳಿತದಿಂದ ಕ್ಷೇತ್ರದ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ” ಎಂದು ಹೇಳಿದರು.


“ರಾಜ್ಯದ ವಿವಿಧ ನಿಗಮ ಹಾಗೂ ಮಂಡಳಿಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಜಿ.ಎಸ್. ಪಾಟೀಲರು ಆಡಳಿತಾತ್ಮಕ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಇದುವರೆಗೆ ಯಾವುದೇ ಹಗರಣ ಅಥವಾ ಭ್ರಷ್ಟಾಚಾರದ ಆರೋಪಗಳಿಗೆ ಒಳಗಾಗದೆ ಸ್ವಚ್ಛ ರಾಜಕೀಯ ಜೀವನ ನಡೆಸಿರುವುದು ಅವರ ದೊಡ್ಡ ಶಕ್ತಿಯಾಗಿದೆ. ಇಂತಹ ಅನುಭವಿ ಹಾಗೂ ಜನಪ್ರಿಯ ನಾಯಕರಿಗೆ ಸಚಿವ ಸ್ಥಾನ ನೀಡಿದರೆ ರೋಣ ಮತಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ” ಎಂದು ಅಭಿಪ್ರಾಯಪಟ್ಟರು.
ರೋಣ ತಾಲೂಕು ಹಲವು ವರ್ಷಗಳಿಂದ ಸಚಿವ ಸ್ಥಾನದಿಂದ ವಂಚಿತವಾಗಿರುವುದನ್ನು ಉಲ್ಲೇಖಿಸಿದ ಅವರು, “ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆಯನ್ನು ಬಲಪಡಿಸುವಲ್ಲಿ ಜಿ.ಎಸ್. ಪಾಟೀಲರು ಮಹತ್ವದ ಪಾತ್ರ ವಹಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಜಿಲ್ಲೆಯ ಮಟ್ಟದಲ್ಲಿ ಅವರು ಮಾಡಿದ ಸಂಘಟನೆ ಹಾಗೂ ಶ್ರಮವನ್ನು ಪಕ್ಷದ ವರಿಷ್ಠರು ಗಮನಿಸಬೇಕು. ಈ ಬಾರಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡುವುದು ನ್ಯಾಯಸಮ್ಮತವಾಗಲಿದೆ” ಎಂದರು.
ಮುಂದುವರಿದು ಮಾತನಾಡಿದ ಅವರು, “ಒಂದು ವೇಳೆ ಸಚಿವ ಸ್ಥಾನ ನೀಡದಿದ್ದರೆ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಗ್ರ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಅಗತ್ಯವಿದ್ದಲ್ಲಿ ಸಾಮೂಹಿಕ ರಾಜೀನಾಮೆ, ಪ್ರತಿಭಟನೆ, ಧರಣಿ ಹಾಗೂ ತುಮಕೂರಿನಿಂದ ಕೆಪಿಸಿಸಿ ಕಚೇರಿವರೆಗೆ ಪಾದಯಾತ್ರೆ ನಡೆಸುವಂತಹ ಹೋರಾಟದ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಗಿರೀಶ (ಆನಂದ) ಹಳ್ಳಿ, ಬಸವರಾಜ ಪೂಜಾರ, ಅಪ್ಪಣ್ಣ ಹಳ್ಳಿ, ಪರಶುರಾಮ ತಲೇಖಾನ್, ಅಭಿಷೇಕ ಕುಸಮ್ಮನವರ, ಅಂದಪ್ಪ ಎಸ್. ಕುರಿ, ಬಸವರಾಜ ಹುಲ್ಯಾಳ, ಭೀಮಪ್ಪ ಖ್ಯಾರ, ಮುತ್ತಪ್ಪ ಪೂಜಾರ, ಮುತ್ತಪ್ಪ ಖ್ಯಾರ, ದುರುಗಪ್ಪ ತಲೇಖಾನ್, ಹುಲಗಪ್ಪ ಬಂಗಾಳಿಗಿಡದ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕರ್ತರು ರಾಷ್ಟ್ರೀಯ ಹಾಗೂ ರಾಜ್ಯ ಕಾಂಗ್ರೆಸ್ ನಾಯಕರ ಪರ ಜಯಘೋಷಗಳನ್ನು ಕೂಗುತ್ತಾ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಸೊಪ್ಪಯ್ಯ ಸೊಪ್ಪಿಹಿರೇಮಠ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶಗೌಡ ಮುಲ್ಕಿ ಪಾಟೀಲ, ಮಹೇಶ ಕುರಿ, ನರೇಗಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ, ಹನಮಪ್ಪ ತೊಂಡಿಹಾಳ, ತಿಮ್ಮರೆಡ್ಡಿಪ್ಪ ಹೊಸಮನಿ, ಶರಣಪ್ಪ ಪೂಜಾರ, ಬಾಳಪ್ಪ ಬುರಡಿ, ಬಸಪ್ಪ ಮೂಲಿಮನಿ, ಮಹಾಂತೇಶ ಪ್ರಭಣ್ಣವರ, ಪ್ರವೀಣ ಬೈರಗೊಂಡ, ನವೀನ್ ಮಾದಿನೂರ, ಅಂದೇಶ ಶಿರೂರು, ವೀರಭದ್ರಪ್ಪ ನವಲಗುಂದ, ಮಂಜುನಾಥ ಹಳ್ಳಿ, ಮಂಜುನಾಥ ನವಲಗುಂದ, ಆನಂದ ಕೋಗಿಲೆ, ಭೀಮಪ್ಪ ಚಲವಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

You may also like

Leave a Comment

ಕೆಜಿಎಂಎಸ್ ಶಾಲೆಯಲ್ಲಿ ಪ್ರಥಮ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಣೆ   ರೋಣ ಮತಕ್ಷೇತ್ರದ ಅಭಿವೃದ್ಧಿಗಾಗಿ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು: ಎ.ಸಿ. ಪಾಟೀಲ   ಜೂ.14 ರಂದು ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’   ಪ್ರೊ. ಬಿ. ಕೃಷ್ಣಪ್ಪನವರ ಸ್ಮರಣೆಯಲ್ಲಿ ಸೇವಾ ಕಾರ್ಯ ಕೈಗೊಂಡ ಡಿ.ಎಸ್.ಎಸ್.   ಒಳ್ಳೆಯವರ ಒಡನಾಟದಲ್ಲಿ ಬಾಳಿದರೆ ಜೀವನ ವಿಕಾಸ : ಶ್ರೀ ರಂಭಾಪುರಿ ಜಗದ್ಗುರುಗಳು