ಚೈತನ್ಯ ನ್ಯೂಸ್ 24 ವಾರ್ತೆ ನರೇಗಲ್ಲ ಅ.16:
ರಾಜಕೀಯದಲ್ಲಿ ಅಧಿಕಾರಕ್ಕಿಂತ ಸೇವಾ ಮನೋಭಾವ ಮುಖ್ಯ. ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸುತ್ತ, ಶಿಕ್ಷಕರ ಹಾಗೂ ಯುವಜನರ ಆಶೋತ್ತರಗಳಿಗೆ ಧ್ವನಿಯಾಗಿರುವ ಎಸ್.ವಿ. ಸಂಕನೂರ ಅವರಂತಹ ಸರಳ, ಸಜ್ಜನ ವ್ಯಕ್ತಿಗಳು ವಿಧಾನ ಪರಿಷತ್ಗೆ ಆಯ್ಕೆಯಾಗುವುದು ಅಗತ್ಯ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಹೇಳಿದರು.
ಪಟ್ಟಣದ 9ನೇ ವಾರ್ಡ್ನ ಉಮೇಶ ಕೊತಬಾಳ ಅವರ ಮಹಡಿ ಮೇಲೆ ಬುಧವಾರ ಸಂಜೆ ನಡೆದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಪದವೀಧರರ ಆಶೋತ್ತರಗಳಿಗೆ ಧ್ವನಿಯಾಗಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ, ಜನರ ವಿಶ್ವಾಸಕ್ಕೆ ಬೆಲೆ ನೀಡುವ ನಾಯಕತ್ವ ವಿಧಾನ ಪರಿಷತ್ನಲ್ಲಿ ಇರಬೇಕು. ಈ ನಿಟ್ಟಿನಲ್ಲಿ ಸಂಕನೂರ ಅವರ ಸೇವೆ, ಸರಳತೆ ಹಾಗೂ ಜನಪರ ವ್ಯಕ್ತಿತ್ವ ಮತದಾರರಲ್ಲಿ ವಿಶ್ವಾಸ ಮೂಡಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸುಭದ್ರವಾಗಿ ಮುನ್ನಡೆಯುತ್ತಿದ್ದು, ದೇಶದ ಭದ್ರತೆ ಹಾಗೂ ಯುವಜನರ ಶಕ್ತಿ ರಾಷ್ಟ್ರದ ಪ್ರಗತಿಗೆ ಪೂರಕವಾಗಬೇಕು. ದೇಶಕ್ಕೆ ಅಗ್ನಿವೀರರಂತಹ ಸಮರ್ಪಿತ ಯುವಶಕ್ತಿಯ ಅಗತ್ಯವಿದೆ ಎಂದು ಹೇಳಿದರು.
ವಾಯವ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ, ಎಸ್.ವಿ. ಸಂಕನೂರ ಪ್ರತಿಭಾವಂತ, ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವದವರು. ಶಿಕ್ಷಕರಾಗಿ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿರುವ ಅವರು, ಪದವೀಧರರ ಹಿತಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸೇವಾ ಮನೋಭಾವದ ಇಂತಹ ಅಭ್ಯರ್ಥಿಯನ್ನು ಮತದಾರರು ಬೆಂಬಲಿಸಿ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಎಸ್.ವಿ. ಸಂಕನೂರ ಮಾತನಾಡಿ, ಕ್ಷೇತ್ರದ ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡುವುದು ನನ್ನ ಬದ್ಧತೆಯಾಗಿದೆ. ಮುಂಬರುವ ಚುನಾವಣೆ ರಾಜ್ಯದ ರಾಜಕೀಯದ ದಿಕ್ಸೂಚಿಯಾಗಲಿದೆ. ಅಭ್ಯರ್ಥಿಯ ಸಾಮರ್ಥ್ಯದಷ್ಟೇ ಕಾರ್ಯಕರ್ತರ ಸಂಘಟನೆ, ಪರಿಶ್ರಮ ಹಾಗೂ ಜವಾಬ್ದಾರಿಯೂ ಮಹತ್ವದ್ದಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರೂ ಪಕ್ಷದ ಗೆಲುವಿಗಾಗಿ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಹೇಳಿದರು.
ಹಿರಿಯ ಬಿಜೆಪಿ ಮುಖಂಡ ಅಶೋಕ್ ನವಲಗುಂದ, ರೋಣ ಬಿಜೆಪಿ ಮಂಡಲ ಅಧ್ಯಕ್ಷ ಉಮೇಶ್ ಮಲ್ಲಾಪುರ, ಮಾಜಿ ರೋಣ ಬಿಜೆಪಿ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ, ಮುಖಂಡರಾದ ಅಶೋಕ ಬೇವಿನಕಟ್ಟಿ, ನ್ಯಾಯವಾದಿ ಉಮೇಶ್ ಸಂಗನಾಳಮಠ, ಶಶಿಧರ್ ಸಂಕನಗೌಡ್ರ, ನಿಂಗೂ ಕಣವಿ, ಮೌನೇಶ ಹೊಸಮನಿ, ಹನಮಂತ ಬಾಗಲಿ, ಮಹೇಶ ಶಿವಶಿಂಪರ, ಯಲ್ಲಪ್ಪ ಮಣ್ಣೊಡ್ಡರ, ಶಿವು ಇಲಕಲ್ಲ, ವೀರಣ್ಣ ಗುಜಮಾಗಡಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.