ಚೈತನ್ಯ ನ್ಯೂಸ್ ೨೪ ವಾರ್ತೆ ನರೇಗಲ್ಲ ಅ.೧೬:
ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಸಾಮರ್ವತಯವನ್ನು ಗುರುತಿಸಿಕೊಂಡು, ‘ನನ್ನಿಂದ ಏನೂ ಸಾಧ್ಯವಿಲ್ಲ’ ಎಂಬ ನಕಾರಾತ್ಮಕ ಭಾವನೆಯನ್ನು ಮನಸ್ಸಿನಿಂದ ತೊಡೆದುಹಾಕಬೇಕು. ಆತ್ಮವಿಶ್ವಾಸ, ದೃಢಸಂಕಲ್ಪ ಹಾಗೂ ನಿರಂತರ ಪ್ರಯತ್ನದಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಮಾರನಬಸರಿ ಗ್ರಾಮದಲ್ಲಿ ನರೇಗಲ್ಲಿನ ಶ್ರೀ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ವತಿಯಿಂದ ಆಯೋಜಿಸಿರುವ ಏಳು ದಿನಗಳ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಮಹಾತ್ಮ ಗಾಂಧೀಜಿಯವರ ಜನ್ಮಶತಮಾನೋತ್ಸವದ ಸ್ಮರಣಾರ್ಥ 1969ರಲ್ಲಿ ಆರಂಭವಾದ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ. ‘ನನ್ನಿಂದ ಅಸಾಧ್ಯ’ ಎಂಬ ಆಲೋಚನೆಯನ್ನು ಬದಿಗಿಟ್ಟು, ‘ನನ್ನಿಂದ ಎಲ್ಲವೂ ಸಾಧ್ಯ’ ಎಂಬ ಸಕಾರಾತ್ಮಕ ಮನೋಭಾವದಿಂದ ಮುನ್ನಡೆಯಬೇಕು. ಜೀವನದಲ್ಲಿ ಎಂತಹ ಪರಿಸ್ಥಿತಿ ಎದುರಾದರೂ ಆತಂಕಕ್ಕೊಳಗಾಗದೆ ಧೈರ್ಯದಿಂದ ಎದುರಿಸಬೇಕು. ತಮ್ಮ ಸಾಮರ್ಥ್ಯವನ್ನು ಸಮಾಜದ ಒಳಿತಿಗಾಗಿ ಬಳಸಿಕೊಂಡು ಸಾರ್ಥಕ ಬದುಕು ರೂಪಿಸಿಕೊಳ್ಳಬೇಕು ಎಂದು ಶ್ರೀಗಳು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ಎವಿವಿಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, 1969ರಲ್ಲಿ ಆರಂಭವಾದ ರಾಷ್ಟ್ರೀಯ ಸೇವಾ ಯೋಜನೆಯು ಮಹಾತ್ಮ ಗಾಂಧೀಜಿಯವರ ಗ್ರಾಮೀಣ ಅಭಿವೃದ್ಧಿಯ ಕನಸಿಗೆ ಪೂರಕವಾಗಿದೆ. ಅಂದಿನ ಕೇಂದ್ರ ಶಿಕ್ಷಣ ಸಚಿವರಾಗಿದ್ದ ವಿ.ಕೆ. ರಾವ್ ಅವರ ನೇತೃತ್ವದಲ್ಲಿ ಈ ಯೋಜನೆ ಜಾರಿಗೆ ಬಂದಿತು ಎಂದು ತಿಳಿಸಿದರು.
‘ನನಗಾಗಿ ಅಲ್ಲ, ಎಲ್ಲರಿಗಾಗಿ’ ಎಂಬ ಉದಾತ್ತ ಧ್ಯೇಯವನ್ನು ಎನ್ಎಸ್ಎಸ್ ಹೊಂದಿದೆ. ಸಮುದಾಯದೊಂದಿಗೆ ಬೆರೆತು ಜನರ ಬದುಕು ಹಾಗೂ ಸಮಸ್ಯೆಗಳನ್ನು ಅರಿತುಕೊಳ್ಳುವುದು, ಅವರ ಅಭಿವೃದ್ಧಿಗೆ ಶ್ರಮಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಶಿಬಿರಾರ್ಥಿಗಳು ವಿನೂತನ ಕಾರ್ಯಕ್ರಮಗಳ ಮೂಲಕ ಗ್ರಾಮಸ್ಥರ ಮನಸ್ಸು ಗೆಲ್ಲಬೇಕು. ಗ್ರಾಮೀಣ ಜನರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡು, ಅವರ ಅಗತ್ಯಗಳನ್ನು ಅರಿತು ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಎಸ್ಎ ಪಿಯು ಕಾಲೇಜಿನ ಅಧ್ಯಕ್ಷ ಮಹಾಂತೇಶ ಸೋಮನಕಟ್ಟಿ, ಪ್ರಾಚಾರ್ಯ ವೈ.ಸಿ. ಪಾಟೀಲ, ಗದಗದ ಎಸ್ಎ ಪಿಯು ಕಾಲೇಜಿನ ಪ್ರಾಚಾರ್ಯ ವಿದ್ಯಾಸಾಗರ ಎ.ಎಂ. ಹಾಗೂ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕಲ್ಲಯ್ಯ ಹಿರೇಮಠ, ಗುರುಲಿಂಗಯ್ಯ ಮಂಟಯ್ಯನವರಮಠ, ಗ್ರಾಮದ ಪ್ರಮುಖರಾದ ಸಂಗನಬಸಪ್ಪ ಹಾದಿಮನಿ, ರಾಜಪ್ಪ ಶಿವಪ್ಪ ಮಳ್ಳಿ ಹಾಗೂ ಶೈಲಪ್ಪ ಶಾಂತಗೇರಿಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಎಂ.ಎಸ್. ಹೊನ್ನವಾಡ, ಎಸ್.ಆರ್. ಬಾಗಲತ್ತಿ, ಸಹಾಯಕ ಕಾರ್ಯಕ್ರಮಾಧಿಕಾರಿ ಸರ್ಜಾಪುರ, ಮಾರುತಿ ಹೂಗಾರ, ನಂದೀಶ್ ಅಚ್ಚಿ, ಎಂ.ಎಂ. ಮೆಣಸಿಗಿ, ಎ.ಐ. ಪಾಪಣ್ಣವರ, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು