ನರೇಗಲ್ಲ ಏ.28. ಸಮೀಪದ ಜಕ್ಕಲಿ ಗ್ರಾಮದಲ್ಲಿಂದು ಮಂಗಳವಾರ ಮುಂಜಾನೆ ಗ್ರಾಮದ ಎಲ್ಲಾ ದೇವಾನು ದೇವತೆಗಳ ಗುಡಿಗಳಿಗೆ ಮಕ್ಕಳು ತೆರಳಿ ನೀರು ಸುರಿದು ಪ್ರಾರ್ಥಿಸಿದರು.
ಅಡಕೇಶ್ವರ, ಮಡಿಕೇಶ್ವರ, ಬ್ಯಾಳಿ ಬಸವೇಶ್ವರ ಮಹಾಂತ ಮಲ್ಲಯ್ಯ ಉಘೇ ಉಘೇ..ಹರ್ವ ಹಾವಿನ ಗಂಡ, ಉರುವ ಕಿಚ್ಚಿನ ಗಂಡ ಮಹಾಂತ ಮಲ್ಲಯ್ಯ ಉಘೇ ಉಘೇ.. ಹರಹರ ಮಹಾದೇವ ಎಂಬ ಜಾನಪದ ಶೈಲಿಯ ಭಕ್ತಿ ಗೀತೆಯ ದಾರಿಯುದ್ದಕ್ಕೂ ಜಯಘೋಷಣೆಯೊಂದಿಗೆ ಸಾಗಿ ದೇವಾನುದೇವತೆಗಳ ಕಲ್ಲಿನ ಮೂರ್ತಿಗಳಿಗೆ ಕೊಡಗಳಿಂದ ನೀರು ಸುರಿದು ಪ್ರಾರ್ಥಿಸಿದರು.
ನರೇಗಲ್ಲ ಹೋಬಳಿಯಲ್ಲಿ ಹಿಂದಿನಿಂದಲೂ ವಾರ ಮಾಡುವ ಪದ್ಧತಿ ಆಚರಣೆಯಲ್ಲಿದೆ, ಈ ಹಬ್ಬದ ಪ್ರಯುಕ್ತ ರೈತರ ಮಕ್ಕಳು ಬೆಳಿಗ್ಗೆ ಎದ್ದು ಅವರಿವರ ಹತ್ತರ ಕಾಣಿಕೆ ಸಂಗ್ರಹಿಸುತ್ತಾರೆ. ಬಳಿಕ ತಣ್ಣೀರಿನಲ್ಲಿ ಸ್ನಾನ ಮಾಡಿ, ಮಡಿ ಉಡಿಯಿಂದ ಹಣೆ ಹಾಗೂ ಮೈಯಿಗೆ ವಿಭೂತಿ ಬಳಿದುಕೊಂಡು ನೀರು ತುಂಬಿದ ಕೊಡವನ್ನು ಹೊತ್ತು ಊರಿನ ಎಲ್ಲಾ ದೇವಸ್ಥಾನಗಳಿಗೆ ಹೋಗುತ್ತಾರೆ. ಅಲ್ಲಿನ ಮೂರ್ತಿಗಳಿಗೆ ಒಬ್ಬರ ನಂತರ ಒಬ್ಬರಂತೆ ನೀರು ಸುರಿಯುತ್ತಾರೆ. ಭಕ್ತಿ ಭಾವದಿಂದ ಎಣ್ಣೆ ಬತ್ತಿಯ ದೀಪಹಚ್ಚಿ ಊದುಬತ್ತಿ ಬೆಳಗುತ್ತಾರೆ. ಅಲ್ಲಿ
ಈ ವರ್ಷದಲ್ಲಿ ಉತ್ತಮವಾದ ಮುಂಗಾರು ಮತ್ತು ಹಿಂಗಾರು ಮಳೆ, ಬೆಳೆಗಾಗಿ ಪ್ರಾರ್ಥಿಸುತ್ತಾರೆ.
” ಪ್ರಸಕ್ತ ಸಾಲಿನಲ್ಲಿ ಏಪ್ರಿಲ್ ೨೮ ರಂದು ಆರಂಭವಾಗಿರುವ ಈ ಆಚರಣೆಯು ಪ್ರತಿ ಮಂಗಳವಾರ ಮತ್ತು ಶುಕ್ರವಾರದಂತೆ ಐದು ವಾರಗಳ ನಡೆಯುತ್ತಿದೆ. ಕೊನೆಯ ವಾರ ಮಾರನಬಸರಿ ಅರ್ಧ ಕಿಲೋ ಮೀಟರ್ ದೂರದ ಹೊಲದಲ್ಲಿರುವ ದೇವತೆ ಮರಕ್ಕೆ ಗ್ರಾಮದ ಎಲ್ಲಾ ಓಣಿಗಳ ಮಕ್ಕಳು ಸೇರಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮರದ ಕೆಳಗೆ ಮಣ್ಣಿನಿಂದ ಸುಂದರವಾದ ಮನೆ ನಿರ್ಮಿಸಿ ಒಳಗೆ ದೀಪ ಹಚ್ಚಿ ಬೆಳಗಿಸಿ ವರುಣ ದೇವ ಮಳೆ ಬೆಳೆ ಚೆನ್ನಾಗಿ ಬರಲಿ ಎಂದು ಪ್ರಾರ್ಥಿಸುತ್ತಾರೆ.
ಬಳಿಕ ಅಲ್ಲಿ ಉಪಹಾರ ಕೂಟ ಏರ್ಪಡಿಸಿ ಸಂತೃಪ್ತರಾಗುತ್ತಾರೆ. ಸಂಜೆ ವೇಳೆ ಗ್ರಾಮದ ಎಲ್ಲಾ ಮಹಿಳೆಯರು ಎಲ್ಲಾ ಗುಡಿ ಗುಂಡಾರಗಳಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸುತ್ತಾರೆ.
ವಿಶೇಷ ವರದಿ: ಪತ್ರಕರ್ತ ಸಂಗಮೇಶ ಮೆಣಸಗಿ. ಜಕ್ಕಲಿ
ಮಕ್ಕಳಿಂದ ಮಹಾಂತ ಮಲ್ಲಯ್ಯ ಉಘೆ ಉಘೆ: ವರುಣನ ವರಿಸಲು ಮುಂದಾದ ಚಿಣ್ಣರು :
256
previous post