ಚೈತನ್ಯ ನ್ಯೂಸ್24 ನರೇಗಲ್ಲ, ಏ.29:
ಗುರು-ಶಿಷ್ಯರ ಅನನ್ಯ ಬಾಂಧವ್ಯ, ಕೃತಜ್ಞತೆಯ ಕಣ್ಣೀರು ಮತ್ತು ನೆನಪುಗಳ ಹೊನಲು—ಎಲ್ಲಾ ಒಂದೇ ವೇದಿಕೆಯಲ್ಲಿ ಒಂದಾದ ಭಾವಪೂರ್ಣ ಕ್ಷಣಗಳಿಗೆ ನರೇಗಲ್ಲ ಪಟ್ಟಣದ ಶ್ರೀ ಅನ್ನದಾನೇಶ್ವರ ಶಿವಾನುಭವ ಮಂಟಪ ರವಿವಾರ ಸಾಕ್ಷಿಯಾಯಿತು. ಶ್ರೀ ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಯ 2005 ಮತ್ತು 2006ನೇ ಸಾಲಿನ ಹಳೆಯ ವಿದ್ಯಾರ್ಥಿನಿಯರು ತಮ್ಮ ಜೀವನದ ದಾರಿಗೆ ಬೆಳಕು ಹಚ್ಚಿದ ಗುರುಗಳಿಗೆ ಗೌರವ ಸಲ್ಲಿಸಲು “ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ” ಕಾರ್ಯಕ್ರಮವನ್ನು ಆಯೋಜಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಜಿ.ಕೆ. ಕಾಳೆ ಮಾತನಾಡಿ, “ಗುರುಗಳನ್ನು ಸ್ಮರಿಸುವುದು ಎಂದರೆ ನಮ್ಮ ಜೀವನದ ಮೌಲ್ಯಗಳನ್ನು ನೆನಪಿಸಿಕೊಳ್ಳುವುದೇ ಆಗಿದೆ. ಅವರ ಸ್ಮರಣೆ ನಮ್ಮನ್ನು ಸದ್ಗತಿಯತ್ತ ಕೊಂಡೊಯ್ಯುತ್ತದೆ ಹಾಗೂ ಪುಣ್ಯ ಪ್ರಾಪ್ತಿಗೆ ಕಾರಣವಾಗುತ್ತದೆ,” ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳು ಗುರು-ಶಿಷ್ಯರ ಸಂಬಂಧವನ್ನು ಜೀವಂತವಾಗಿಡುವ ಮಹತ್ವದ ಸೇತುವೆಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿ, ಶ್ರೀ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯಡಿಯಲ್ಲಿ ನಡೆಯುತ್ತಿರುವ ಈ ಶಾಲೆ ಭಾಗದ ಪ್ರಮುಖ ವಿದ್ಯಾಸಂಸ್ಥೆಯಾಗಿದ್ದು, ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಮಹತ್ವದ ಪಾತ್ರವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿನಿಯರು ತಮ್ಮ ಗುರುಗಳಿಗೆ ಪುಷ್ಪವೃಷ್ಟಿ ಮಾಡಿ ಸನ್ಮಾನಿಸಿದರು. ಹಲವು ವರ್ಷಗಳ ನಂತರ ತಮ್ಮ ಗುರುಗಳನ್ನು ಭೇಟಿಯಾದ ವಿದ್ಯಾರ್ಥಿನಿಯರ ಕಣ್ಣುಗಳಲ್ಲಿ ಕೃತಜ್ಞತೆಯ ಕಣ್ಣೀರು ತುಂಬಿಕೊಂಡ ದೃಶ್ಯಗಳು ಕಾರ್ಯಕ್ರಮದ ಭಾವನಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಿತು. ಗುರುಗಳೂ ತಮ್ಮ ಶಿಷ್ಯರನ್ನು ಕಂಡು ಸಂತೋಷಭರಿತರಾಗಿ, ಹಳೆಯ ನೆನಪುಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯ ಎಸ್.ಎನ್. ಹೂಲಗೇರಿ ಉದ್ಘಾಟಿಸಿದರು. ರೇಖಾ ಮಡಿವಾಳ ಹಾಗೂ ರೇಖಾ ಉಳ್ಳಾಗಡ್ಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರಾಸ್ತಾವಿಕವಾಗಿ ಶ್ರೀಮತಿ ಸ್ನೇಹಾ ಕಣಿವಿ ,ಜಯಶ್ರೀ ಆದಿ ಮಾತನಾಡಿದರು. ಮಂಜುಳಾ ಪಾಚಂಗಿ ಪ್ರಾರ್ಥನೆ ಸಲ್ಲಿಸಿದರು. ಗುರುಗಳ ಸ್ಮರಣೆಯನ್ನು ಶ್ವೇತಾ ಅರವಟಗಿಮಠ ಹಾಗೂ ಗೀತಾ ಕಣಗಿನಹಾಳ ಗೀತ ಗಾಯನದ ಮೂಲಕ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಎ.ಟಿ. ಮಳ್ಳಳ್ಳಿ, ಬಿ.ಡಿ. ಯರಗೊಪ್ಪ, ಎಂ.ಎಸ್. ಅತ್ತಾರ್, ಎಸ್. ಶಿವಮೂರ್ತಿ, ಶ್ರೀಮತಿ ಎಸ್.ಎಫ್. ಧರ್ಮಾಯತ, ಶ್ರೀಮತಿ ಆರ್.ಎಂ. ಗುಳಬಾಳ, ರಮೇಶ್ ಶಿಳ್ಳಿನ್ ಸೇರಿದಂತೆ ಶಾಲಾ ಸಿಬ್ಬಂದಿ ಬಸಮ್ಮ ಅಸುಂಡಿ ಹಾಗೂ ಸಂಗಮೇಶ ಕುರಡಗಿ ಉಪಸ್ಥಿತರಿದ್ದರು.
ಸುಮಾರು 50ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಶಾಲಾ ದಿನಗಳ ಅನುಭವಗಳನ್ನು ಹಂಚಿಕೊಂಡರು. ಬೆಂಗಳೂರು, ಪುಣೆ, ದಾಂಡೇಲಿ ಮೊದಲಾದ ದೂರದ ಊರುಗಳಿಂದ ಆಗಮಿಸಿದ ವಿದ್ಯಾರ್ಥಿನಿಯರ ಉಪಸ್ಥಿತಿಯಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಮೂಡಿತು. ಕಾರ್ಯಕ್ರಮವನ್ನು ಕುಮಾರಿ ಶಯನಾಜ್ ಉಮಚಗಿ, ಅನಿತಾ ವೈದ್ಯಮಠ, ಆಶಾ ಮೇಟಿ ಇವರು ನಿರ್ವಹಿಸಿದರು
ಗುರು ಸ್ಮರಣೆ – ಜೀವನದ ಬೆಳಕು: ನರೇಗಲ್ಲಲ್ಲಿ ಕಣ್ಣೀರಿನ ನೆನಪುಗಳಲ್ಲಿ ಅರಳಿದ ಗುರುವಂದನೆ
232