Home ಕರ್ನಾಟಕಆಧ್ಯಾತ್ಮ ಸಂಪತ್ತು ಅಮರ : ಶ್ರೀ ರಂಭಾಪುರಿ ಜಗದ್ಗುರುಗಳು

ಆಧ್ಯಾತ್ಮ ಸಂಪತ್ತು ಅಮರ : ಶ್ರೀ ರಂಭಾಪುರಿ ಜಗದ್ಗುರುಗಳು

ಮಾನವ ಜೀವನ ಉನ್ನತಿಗೆ ಧರ್ಮಾಚರಣೆ ಬಹಳ ಮುಖ್ಯ: ಆದರ್ಶ ಚಿಂತನಗಳಿ0ದ ಮನುಷ್ಯನ ಬಾಳು ಸಮೃದ್ಧಗೊಳ್ಳುತ್ತದೆ:

by Editor
0 comments
ಚೈತನ್ಯ ನ್ಯೂಸ್‌ 24 ರಾಮನಗರ ಜೂ.27:
  ಶಾಂತಿ ನೆಮ್ಮದಿಯ ಬದುಕಿಗೆ ಹಣ ಮುಖ್ಯವಲ್ಲ. ಭೌತಿಕ ಸಂಪತ್ತು ಶಾಶ್ವತವಲ್ಲ. ಆಧ್ಯಾತ್ಮ ಸಂಪತ್ತು ನಿಜವಾದ ಬಾಳಿನ ಬುತ್ತಿಯೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
  ಅವರು ಶನಿವಾರ ತಾಲೂಕಿನ ಅವ್ವೇರಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಬೆಟ್ಟದಲ್ಲಿ ಶ್ರೀಮದ್ ರಂಭಾಪುರಿ ಖಾಸಾ ರೇವಣಸಿದ್ಧೇಶ್ವರ ದಾಸೋಹ ಮಠದ ಆವರಣದಲ್ಲಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮಾನವ ಜೀವನ ಉನ್ನತಿಗೆ ಧರ್ಮಾಚರಣೆ ಬಹಳ ಮುಖ್ಯ. ಆದರ್ಶ ಚಿಂತನಗಳಿ0ದ ಮನುಷ್ಯನ ಬಾಳು ಸಮೃದ್ಧಗೊಳ್ಳುತ್ತದೆ. ಹಣದ ಜೊತೆ ಜನ ಇರಬಹುದು. ಆದರೆ ಒಳ್ಳೆಯ ಗುಣದ ಜೊತೆಗೆ ಭಗವಂತ ಸದಾ ಇರುತ್ತಾನೆ ಎಂಬ ನಂಬಿಕೆ ಕಳೆದುಕೊಳ್ಳಬಾರದು. ಜೀವನದಲ್ಲಿ ಏನೇ ಮರೆತರೂ ನಾವು ನಡೆದು ಬಂದ ದಾರಿಯನ್ನು ಎಂದಿಗೂ ಮರೆಯಬಾರದು. ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಧರ್ಮದ ತತ್ವ ಸಿದ್ಧಾಂತಗಳ ಬೇರು ಬಹಳ ಗಟ್ಟಿಯಾಗಿವೆ. ಜಾತಿ ಮತ ಧರ್ಮಗಳ ಸಂಕೋಲೆ ಮೀರಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಮತ್ತು ಶ್ರೀ ಜಗದ್ಗುರು ರೇವಣಸಿದ್ಧೇಶ್ವರರು ಮಾಡಿದ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿ ಎಲ್ಲ ಕ್ರಾಂತಿಗಳ ಮೂಲ ಗಂಗೋತ್ರಿಯಾಗಿದೆ. ಶ್ರೀ ಜಗದ್ಗುರು ರೇವಣಸಿದ್ಧೇಶ್ವರರ ತಪೋಬಲದಿಂದ ಈ ಭಾಗದಲ್ಲಿ ಜಾಗೃತಿ ಉಂಟು ಮಾಡಿದ್ದನ್ನು ಮರೆಯಲಾಗದು. ಶ್ರೀ ರಂಭಾಪುರಿ ಪೀಠ ಪರಂಪರೆಯಲ್ಲಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರರು ಅದ್ಭುತ ಸಾಧನೆ ಮಾಡಿ ಧರ್ಮ ಸಂಸ್ಕೃತಿ ಮತ್ತು ಆದರ್ಶಗಳನ್ನು ಬೆಳೆಸಿಕೊಂಡು ಬಂದಿದ್ದಾರೆ. ಈ ಪವಿತ್ರ ಕ್ಷೇತ್ರದಲ್ಲಿ ಶ್ರೀ ರಂಭಾಪುರಿ ಪೀಠದ ಶಾಖಾ ಮಠ ಇರುವುದನ್ನು ಇತಿಹಾಸ ಸಾರಿ ಸಾರಿ ಹೇಳುತ್ತದೆ.
ಲಿಂ.ಬಸವರಾಜ ಶಿವಾಚಾರ್ಯರು ಕಾಯಕ ಜೀವಿಗಳಾಗಿ ನಿರಂತರ ಮಠದ ಪ್ರಗತಿಗಾಗಿ ಶ್ರಮಿಸಿದರು. ಅವರ ಮನಸ್ಸಿನಲ್ಲಿ ಮಾಡಿಕೊಂಡ ಎಲ್ಲಾ ಸಂಕಲ್ಪಗಳು ಪೂರ್ಣಗೊಂಡಿರುವುದು ಸಂತೋಷದ ಸಂಗತಿ. ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೋತ್ಸವ ಬಹಳ ಸಂಭ್ರಮದಿAದ ಜರುಗಲು ಇಂದಿನ ರಾಜಶೇಖರ ಶಿವಾಚಾರ್ಯ ಸ್ವಾಮಿಗಳ ಪ್ರಯತ್ನ ದೊಡ್ಡದೆಂದರು.
ರಾಜಾಪುರ ಹಿರೇಮಠದ ಡಾ|| ರಾಜೇಶ್ವರ ಶಿವಾಚಾರ್ಯರು ಮತ್ತು ಕಲ್ಲುಬಾಳು ಶಿವಾನಂದ ಶಿವಾಚಾರ್ಯರು ಉಪದೇಶಾಮೃತವನ್ನಿತ್ತರು. ರೇವಣಸಿದ್ದೇಶ್ವರ ದಾಸೋಹ ಮಠದ ರಾಜಶೇಖರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಎಡೆಯೂರು ರೇಣುಕ ಶಿವಾಚಾರ್ಯರು ಅಧ್ಯಕ್ಷತೆ ವಹಿಸಿದ್ದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ವೀರಶೈವ ಧರ್ಮ ಸಂಸ್ಕೃತಿ-ಆದರ್ಶಗಳನ್ನು ಕುರಿತು ಮಾತನಾಡಿದರು. ಧನಗೂರು, ತಾವರೆಕೆರೆ, ಸಂಗೊಳ್ಳಿ, ದೊಡ್ಡಗುಣಿ, ಅಂಕನಹಳ್ಳಿ, ಮುಡುಕುತೊರೆ ಶ್ರೀಗಳವರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು. ಗುರುವಿನಮಠದ ಜಗದೀಶ್ವರ ಶಿವಾಚಾರ್ಯರು ನಿರೂಪಿಸಿದರು.
  ಪ್ರಾತ:ಕಾಲ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು. ಪೂಜಾ ಸೇವೆಯನ್ನು ರೇಣುಕ ಪ್ರಸಾದ ಮತ್ತು ನಾಗೇಂದ್ರ ಪ್ರಸಾದ್ ಸಲ್ಲಿಸಿದರು. ಶ್ರೀಮತಿ ಸ್ವರ್ಣಾಂಭ ವಿಜಯಕುಮಾರ ಅವರು ಪ್ರಚಾರ ಸೇವೆ ಸಲ್ಲಿಸಿದರು. ಸಕಲ ಸದ್ಭಕ್ತರಿಗೆ ಅನ್ನ ದಾಸೋಹ ಜರುಗಿತು.

You may also like

Leave a Comment

ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು   ಅಬ್ಬಿಗೇರಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತಿನ ಕರಿ ಮುರಿತ – ಬಿಳಿ ಬೆಳೆಗೆ ಶುಭ ಸಂಕೇತ   ಕರಿ ಹರಿದ ಬಿಳಿ ಎತ್ತು: ಊರಿಗೇ ಒಲಿದ ಅದೃಷ್ಟ, ಈ ಬಾರಿ ಬಂಪರ್ ಬೆಳೆ ನಿಶ್ಚಿತ!   ಜೀವನದಲ್ಲಿ ಗುರಿಯಿರಲಿ ಉರಿ ಬೇಡ : ಶ್ರೀ ರಂಭಾಪುರಿ ಜಗದ್ಗುರುಗಳು   ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ