154
ಚೈತನ್ಯ ನ್ಯೂಸ್ 24 ಹೊನ್ನಾಳಿ ಜು.1:
ಯಾವ ಸಂಪತ್ತಿಗಾಗಿ ಜೀವ ಜಗತ್ತು ಬದುಕುತ್ತಿದೆಯೋ ಆ ಸಂಪತ್ತಿನ ಪ್ರಾಪ್ತಿಗಾಗಿ ಶ್ರಮಿಸಬೇಕಾಗುತ್ತದೆ. ಪರಿಶ್ರಮ ಮತ್ತು ಪ್ರಯತ್ನದಿಂದ ಸಂಪಾದಿಸಲು ಸಾಧ್ಯ. ಮನುಷ್ಯನ ವ್ಯಕ್ತಿತ್ವ ಎತ್ತರಕ್ಕೆ ಏರಬೇಕಾದರೆ ಆದರ್ಶ ಗುಣಗಳು ಮುಖ್ಯ. ಸದ್ಗುಣ ಸಚ್ಚಾರಿತ್ರ್ಯದಿಂದ ಮಾನವನ ಬದುಕು ಸಮೃದ್ಧಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಬುಧವಾರ ನಗರದ ಹಿರೇಕಲ್ಮಠದ ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರ ೯೧ನೇ ಜನ್ಮ ಜಯಂತ್ಯುತ್ಸವ ಅಂಗವಾಗಿ ಜರುಗಿದ ಜನ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಹಣದ ಜೊತೆ ಜನ ಇರಬಹುದು. ಆದರೆ ಒಳ್ಳೆಯ ಗುಣಗಳ ಜೊತೆ ಭಗವಂತ ಸದಾ ಇರುತ್ತಾನೆ. ಜೀವನದಲ್ಲಿ ಏನೇ ಮರೆತರೂ ನಾವು ನಡೆದು ಬಂದ ದಾರಿಯನ್ನು ಮರೆಯಬಾರದು. ಸೂರ್ಯ ಕಿರಣಗಳು ಕೊಳಕು ಇರುವ ಜಾಗದಲ್ಲಿ ಹೋದರೂ ಕೊಳಕಾಗುವುದಿಲ್ಲ. ಅದೇ ರೀತಿ ಮನುಷ್ಯ ಯಾರ ಜೊತೆ ಇದ್ದರೂ ನಾವು ನಾವಾಗಿರಬೇಕೇ ಹೊರತು ಕೊಳಕಾಗಬಾರದು. ಲಿಂ. ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯರು ಮಾತು ಮನ ಕೃತಿಯಲ್ಲಿ ಒಂದಾಗಿ ಬೆಳಕು ತೋರಿದವರು. ಅವರು ಬದುಕಿದ್ದರೆ ೯೧ನೇ ಜನ್ಮ ಜಯಂತ್ಯುತ್ಸವ ಅವರ ಸಮ್ಮುಖದಲ್ಲಿ ನಡೆಯುತ್ತಿತ್ತು. ಇಂದಿನ ಡಾ. ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ೯೧ನೇ ಜನ್ಮ ದಿನೋತ್ಸವ ನೆನಪಿಗಾಗಿ ಹಲವಾರು ಶಾಲಾ ಕಟ್ಟಡ, ಆರೋಗ್ಯ ಘಟಕ, ವಸತಿ ನಿಲಯ ಮತ್ತು ಗೋ ಸಂವರ್ಧನ ಕೇಂದ್ರ ಕಟ್ಟಡಗಳಿಗೆ ಭೂಮಿ ಪೂಜೆ ಶಿಲಾನ್ಯಾಸ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೈಗೊಂಡ ಕಾರ್ಯಗಳು ತೀವ್ರವಾಗಿ ನಡೆದು ಜನ ಬಳಕೆಗಾಗಿ ಲೋಕಾರ್ಪಣೆಗೊಳ್ಳಲಿ. ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಯಾರೂ ರಾಜಕೀಯ ಬೆರೆಸಬಾರದೆಂದು ಕಿವಿ ಮಾತು ಹೇಳಿದರು.

ಸಾನ್ನಿಧ್ಯ ವಹಿಸಿದ ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಹುಟ್ಟು ಎಷ್ಟು ಸಹಜವೋ ಅಷ್ಟೇ ಮರಣ ನಿಶ್ಚಿತ. ಆದರೆ ಹುಟ್ಟು ಸಾವುಗಳ ಮಧ್ಯದ ಬದುಕನ್ನು ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಾರ್ಥಕಪಡಿಸಿಕೊಂಡರೆAದರು. ಸಾನ್ನಿಧ್ಯ ವಹಿಸಿದ ಶ್ರೀ ಮತ್ಕಾಶಿ ಡಾ. ಚಂದ್ರಶೇಖರ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ ಸಿದ್ಧಾಂತವನ್ನು ಭೂ ಮಂಡಲದಲ್ಲಿ ಸ್ಥಾಪಿಸಿದ ಕೀರ್ತಿ ಪರಮ ಪಂಚಾಚಾರ್ಯರಿಗೆ ಸಲ್ಲುತ್ತದೆ. ಲಿಂ. ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯರು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೆöÊತ ಸಿದ್ಧಾಂತವನ್ನು ಜನಮನಕ್ಕೆ ಮುಟ್ಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ಶ್ರೀ ಕಾಶೀ ಪೀಠದ ನೂತನ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ತಮ್ಮ ಆಶೀರ್ವಚನದಲ್ಲಿ ಆಧುನಿಕ ಯುಗದಲ್ಲಿ ಮನುಷ್ಯ ಯಂತ್ರದAತೆ ದುಡಿದರೂ ಸುಖ ಶಾಂತಿಯಿಲ್ಲ. ಧರ್ಮದ ಪರಿಪಾಲನೆ ಸದ್ವರ್ತನೆಯಿಂದ ಮಾತ್ರ ನೆಮ್ಮದಿ ಪಡೆಯಲು ಸಾಧ್ಯ. ಶಾಂತಿ ಪ್ರಿಯರಾದ ಲಿಂ. ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯರ ಸರಳ ವ್ಯಕ್ತಿತ್ವ ಉದಾತ್ತ ಚಿಂತನ ಜನ ಮನದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ ಎಂದರು.

ನೇತೃತ್ವ ವಹಿಸಿದ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಮನದ ಕತ್ತಲೆ ಕಳೆಯಲು ಗುರು ಬೇಕು. ಪರಶಿವನ ಸಾಕಾರ ರೂಪವೇ ಶ್ರೀ ಗುರು. ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಶುಭಾಗಮನದಿಂದ ಈ ಭಾಗದ ಭಕ್ತರು ಧನ್ಯರಾಗಿದ್ದಾರೆ. ಲಿಂ. ಶ್ರೀ ಒಡೆಯರ್ ಚಂದ್ರಶೇಖರ ಶ್ರೀಗಳವರ ಜೀವನದ ಸಿದ್ಧಿ ಸಾಧನೆಗಳು ಒಂದಲ್ಲ ಹಲವಾರು. ಅವರ ಕಾರುಣ್ಯ ಎಲ್ಲರ ಮೇಲಿರಲೆಂದರು.
ಶ್ರೀ ಚನ್ನಪ್ಪ ಸ್ವಾಮಿ ವೃತ್ತವನ್ನು ಉದ್ಘಾಟಿಸಿದ ಶಾಸಕ ಡಿ.ಜಿ.ಶಾಂತನಗೌಡ್ರು ಮಾತನಾಡಿ ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಇರುವುದೆಲ್ಲವೂ ಅಮೂಲ್ಯ ಸಂಪತ್ತು. ಚಿನ್ನವಿಲ್ಲದೇ ಬದುಕಬಹುದು. ಆದರೆ ಅನ್ನವಿಲ್ಲದೇ ಬದುಕಲಾರದು. ಲಿಂ. ಶ್ರೀ ಒಡೆಯರ್ ಚಂದ್ರಶೇಖರ ಶಿವಾಚಾರ್ಯರು ಭೌತಿಕ ಬದುಕಿಗೆ ಆಧ್ಯಾತ್ಮದ ಅರಿವು ನೀಡಿ ಸನ್ಮಾರ್ಗಕ್ಕೆ ಕರೆತಂದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.ಶ್ರೀ ಒಡೆಯರ್ ಚಂದ್ರಶೇಖರ್ ವೃತ್ತವನ್ನು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿದರು. ದಾವಣಗೆರೆ ಕ್ಷೇತ್ರದ ಶಾಸಕ ಶಾಮನೂರ್ ಸಮರ್ಥ ಅವರು ನೂತನ ಕಟ್ಟಡಗಳ ವಿದ್ಯಾಲಯಕ್ಕೆ ಭೂಮಿ ಪೂಜೆ ನೆರವೇರಿಸಿ ಶಿಲಾಫಲಕ ಅನಾವರಣಗೊಳಿಸಿದರು. ಈ ಅಪೂರ್ವ ಸಮಾರಂಭದಲ್ಲಿ ೨೫ಕ್ಕೂ ಹೆಚ್ಚು ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ರಾಜಕೀಯ ಧುರೀಣರು ಮತ್ತು ದಾನಿಗಳಿಗೆ ಶ್ರೀ ಜಗದ್ಗುರುಗಳವರ ಸಮ್ಮುಖದಲ್ಲಿ ಗುರುರಕ್ಷೆಯಿತ್ತು ಶುಭ ಹಾರೈಸಿದರು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.