ಚೈತನ್ಯ ನ್ಯೂಸ್ 24 ಸವಣೂರ ಜೂ.29:
ವಿಶೇಷ ಲೇಖನ: ಡಾ. ಗುರುಪಾದಯ್ಯ ವೀ. ಸಾಲಿಮಠ,
ಸಾಹಿತಿಗಳು, ಸವಣೂರು, ಹಾವೇರಿ ಜಿಲ್ಲೆ
ಮಾನವನ ಬದುಕಿನಲ್ಲಿ ಕೆಲವು ವ್ಯಕ್ತಿತ್ವಗಳು ಸಾಧನೆಗಳಿಂದ ಮಾತ್ರವಲ್ಲ, ಸರಳತೆ, ಸಹಜತೆ, ಸೇವಾ
ಮನೋಭಾವ, ಸಹಕಾರಿ ಗುಣ ಮತ್ತು ಸಮಾಜಮುಖಿ ಚಿಂತನೆಯಿಂದಲೂ ಅಜರಾಮರರಾಗುತ್ತಾರೆ.
ಅಂತಹ ವ್ಯಕ್ತಿತ್ವಗಳಲ್ಲಿ ಡಾ. ದ್ಯಾಮನಗೌಡ ಟಿ. ಪಾಟೀಲರವರು ಪ್ರಮುಖರು. ಬಡತನದ ಕತ್ತಲೆಯಿಂದ
ಜ್ಞಾನದ ಬೆಳಕಿನೆಡೆಗೆ ತಮ್ಮ ಬದುಕನ್ನು ರೂಪಿಸಿಕೊಂಡು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸಿದ
ಆದರ್ಶ ವಾಣಿಜ್ಯ ಪ್ರಾಧ್ಯಾಪಕರಾಗಿ ಅವರು ಗುರುತಿಸಿಕೊಂಡವರಾಗಿದ್ದಾರೆ.
೧೯೬೬ರ ಜೂನ್ ೨೨ರಂದು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅರಳಿಹಳ್ಳಿಯಲ್ಲಿ ಶ್ರೀ
ತಿರುಕನಗೌಡ ನಿಂ. ಪಾಟೀಲ ಹಾಗೂ ಶ್ರೀಮತಿ ಹಿರಿಯಕ್ಕ ದಂಪತಿಗಳ ಆರು ಮಕ್ಕಳಲ್ಲಿ ಎರಡನೆಯವರಾಗಿ
ಜನಿಸಿದ ಶ್ರೀಯುತರು, ಬಾಲ್ಯದಲ್ಲಿಯೇ ಜೀವನದ ಕಷ್ಟಗಳನ್ನು ಎದುರಿಸಿದವರು. ಆದರೆ ಬಡತನವು ಅವರ
ಕನಸುಗಳಿಗೆ ಎಂದಿಗೂ ಅಡ್ಡಿಯಾಗಲಿಲ್ಲ. ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ಶಿಕ್ಷಣದ ಮೇಲಿನ ಅಪಾರ
ಆಸಕ್ತಿ ಅವರನ್ನು ಉನ್ನತ ಶಿಖರಕ್ಕೆ ಕೊಂಡೊಯ್ದಿದ್ದು ಮಹತ್ತರ ಬೆಳವಣಿಗೆ.
ಪ್ರಾಥಮಿಕ ಶಿಕ್ಷಣವನ್ನು ಅರಳಿಹಳ್ಳಿಯಲ್ಲಿ, ಪ್ರೌಢಶಿಕ್ಷಣವನ್ನು ಕರಜಗಿ ಸರ್ಕಾರಿ ಪ್ರೌಢಶಾಲೆಯಲ್ಲಿ
ಪೂರ್ಣಗೊಳಿಸಿದ ಇವರು, ಧಾರವಾಡದ ಸಿ.ಎಸ್.ಐ. ಕಾಲೇಜಿನಲ್ಲಿ ವಾಣಿಜ್ಯ ಪದವಿ ಪಡೆದು, ಕೊಲ್ಲಾಪುರದ
ಶಿವಾಜಿ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಸ್ನಾತಕೋತ್ತರ ಪದವಿ ಹಾಗೂ ಎಂ.ಫಿಲ್. ಪದವಿಯನ್ನು ಗಳಿಸಿದರು.
ನಂತರ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ. ಪದವಿ ಪಡೆದು ತಮ್ಮ ಶೈಕ್ಷಣಿಕ
ಸಾಧನೆಗೆ ಮತ್ತೊಂದು ಗರಿ ಮೂಡಿಸಿದರು. ೧೯೯೭ರ ಜನವರಿ ೬ರಂದು ವಾಣಿಜ್ಯ ಉಪನ್ಯಾಸಕರಾಗಿ ಸರ್ಕಾರಿ
ಸೇವೆಗೆ ಸೇರಿದ ಇವರು, ಸುಮಾರು ೨೯ ವರ್ಷ ೬ ತಿಂಗಳುಗಳ ಸುದೀರ್ಘ ಸೇವೆಯಲ್ಲಿ ಅನೇಕ ಸರ್ಕಾರಿ
ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಾಣಿಜ್ಯ ವಿಷಯದ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಸಾವಿರಾರು
ವಿದ್ಯಾರ್ಥಿಗಳಿಗೆ ಜ್ಞಾನ ದೀಪ ಹಚ್ಚಿದವರು. ಬೋಧನಾ ವೃತ್ತಿಯನ್ನು ಕೇವಲ ಉದ್ಯೋಗವೆಂದು ಕಾಣದೆ,
ಸಮಾಜ ನಿರ್ಮಾಣದ ಮಹತ್ತರ ಹೊಣೆಗಾರಿಕೆಯೆಂದು ಪರಿಗಣಿಸಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ
ಆತ್ಮವಿಶ್ವಾಸವನ್ನು ಬೆಳೆಸುವ ಕಾರ್ಯವನ್ನು ಮಾಡಿದವರು.
ಶಿಕ್ಷಣ ಕ್ಷೇತ್ರದಲ್ಲಷ್ಟೇ ಅಲ್ಲದೆ ಸಂಶೋಧನಾ ಕ್ಷೇತ್ರದಲ್ಲಿಯೂ ಗಮನಾರ್ಹ ಸಾಧನೆ ಮಾಡಿರುವ ಡಾ.
ಡಿ. ಟಿ. ಪಾಟೀಲರು ೩೦ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿ, ೧೦ಕ್ಕೂ ಹೆಚ್ಚು ಅಂತರ್
ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ತಮ್ಮ ವಿದ್ವತ್ತನ್ನು ಮೆರೆದಿದ್ದಾರೆ. ವಾಣಿಜ್ಯ ವಿಷಯದ ಮೇಲೆ
ಮೂರು ಮಹತ್ವದ ಕೃತಿಗಳನ್ನು ಪ್ರಕಟಿಸಿರುವುದರ ಜೊತೆಗೆ ಇಬ್ಬರು ವಿದ್ಯಾರ್ಥಿಗಳಿಗೆ ಎಂ.ಫಿಲ್.
ಸಂಶೋಧನೆಗೆ ಮಾರ್ಗದರ್ಶನ ನೀಡಿ ಉತ್ತಮ ಸಂಶೋಧಕರನ್ನು ರೂಪಿಸಿರುವ ಹೆಮ್ಮೆ
ಹೊಂದಿದವರಾಗಿದ್ದಾರೆ. ಆಡಳಿತ ಕ್ಷೇತ್ರದಲ್ಲಿಯೂ ಅವರ ಸೇವೆ ಗಮನಾರ್ಹವಾಗಿದ್ದು, ಸುಮಾರು ಐದು
ವರ್ಷಗಳ ಕಾಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಾಗಿ ದಕ್ಷತೆಯಿಂದ
ಕಾರ್ಯನಿರ್ವಹಿಸಿ ಶಿಕ್ಷಣ ಸಂಸ್ಥೆಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದವರಾಗಿದ್ದಾರೆ. ಶಿಸ್ತು,
ಸಮಯಪಾಲನೆ, ವಿದ್ಯಾರ್ಥಿ ಸ್ನೇಹಿ ಆಡಳಿತ ಹಾಗೂ ಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವಲ್ಲಿ
ಮಾದರಿ ವ್ಯಕ್ತಿತ್ವದವರಾಗಿದ್ದಾರೆ.
ವೈಯಕ್ತಿಕ ಜೀವನದಲ್ಲಿಯೂ ಸಹ ಇವರು ಆದರ್ಶ ಕುಟುಂಬಸ್ಥರು. ಅವರ ಪುತ್ರಿ ವೈದ್ಯೆಯಾಗಿದ್ದು,
ಪುತ್ರ ಎಂಜಿನಿಯರ್ ಆಗಿರುವುದು ಶಿಕ್ಷಣದ ಮೇಲಿನ ಅವರ ಬದ್ಧತೆಯ ಪ್ರತೀಕವಾಗಿದೆ. ಸಮಾಜ
ಸೇವೆಯಲ್ಲಿ, ದಾನ ಧರ್ಮಗಳಲ್ಲಿ, ಸಹಕಾರ ಮನೋಭಾವದಲ್ಲಿ ಮತ್ತು ಮಾನವೀಯ ಮೌಲ್ಯಗಳಲ್ಲಿ ಅವರು
ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಇದೀಗ ೨೦೨೬ರ ಜೂನ್ ೩೦ರಂದು ಸರ್ಕಾರಿ ಸೇವೆಯಿಂದ
ನಿವೃತ್ತಿಯಾಗುತ್ತಿರುವ ಈ ಮಹನೀಯರ ಜೀವನಯಾನವು ಕೇವಲ ಒಬ್ಬ ಅಧ್ಯಾಪಕನ ಬದುಕಿನ ಕಥೆಯಲ್ಲ;
ಅದು ಪರಿಶ್ರಮ, ಪ್ರಾಮಾಣಿಕತೆ, ಜ್ಞಾನ, ಸೇವೆ ಮತ್ತು ಮಾನವೀಯ ಮೌಲ್ಯಗಳ ಸ್ಫೂರ್ತಿದಾಯಕ
ಕಾವ್ಯವಾಗಿದೆ. ಶ್ರೀಯುತರ ನಿವೃತ್ತಿಯು ಸೇವೆಯ ಅಂತ್ಯವಲ್ಲ; ಅದು ಹೊಸ ಜೀವನಯಾನದ ಆರಂಭ.
ಅವರ ಅನುಭವ, ಜ್ಞಾನ ಮತ್ತು ಮಾರ್ಗದರ್ಶನವು ಮುಂದಿನ ಪೀಳಿಗೆಗೂ ದಾರಿದೀಪವಾಗಲಿ ಎಂಬುದು
ಈ ಬಡನುಡಿಗಳ ಆಶಯವಾಗಿದೆ. “ಗುರುವಿನ ಜೀವನ ಮುಗಿಯುವುದಿಲ್ಲ; ಅವರ ಬೋಧನೆಗಳು
ವಿದ್ಯಾರ್ಥಿಗಳ ಬದುಕಿನಲ್ಲಿ ಸದಾ ಜೀವಂತವಾಗಿರುತ್ತವೆ.”