Home ಕರ್ನಾಟಕ15,500 ಅಡಿ ಎತ್ತರದ ಹುರ್ರಾ ಟಾಪ್ ಶಿಖರ ಏರಿ ತ್ರಿವರ್ಣ ಧ್ವಜ ಹಾರಿಸಿದ ಜಕ್ಕಲಿಯ ಹೆಮ್ಮೆಯ ಕುವರಿ ಸೃಷ್ಠಿ ಮೇಟಿ

15,500 ಅಡಿ ಎತ್ತರದ ಹುರ್ರಾ ಟಾಪ್ ಶಿಖರ ಏರಿ ತ್ರಿವರ್ಣ ಧ್ವಜ ಹಾರಿಸಿದ ಜಕ್ಕಲಿಯ ಹೆಮ್ಮೆಯ ಕುವರಿ ಸೃಷ್ಠಿ ಮೇಟಿ

by Editor
0 comments

ಸಂಗಮೇಶ ಮೆಣಸಗಿ, ಚೈತನ್ಯ ನ್ಯೂಸ್‌ 24 ನರೇಗಲ್ಲ ಜೂ.21:

ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ (ಎನ್‌ಐಎಂ) ವತಿಯಿಂದ ಆಯೋಜಿಸಲಾದ ಪ್ರತಿಷ್ಠಿತ ಪರ್ವತಾರೋಹಣ ಶಿಬಿರದಲ್ಲಿ ಭಾಗವಹಿಸಿದ್ದ ಜಕ್ಕಲಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಸೃಷ್ಠಿ ಉಮೇಶ್ ಮೇಟಿ ಅವರು 15,500 ಅಡಿ ಎತ್ತರದ ಹುರ್ರಾ ಟಾಪ್ (Hurra Top) ಶಿಖರವನ್ನು ಯಶಸ್ವಿಯಾಗಿ ಏರಿ ಸಾಹಸ ಸಾಧನೆ ಮೆರೆದಿದ್ದಾರೆ.

ಗದಗದ ಜೆ.ಟಿ. ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಹಾಗೂ 38 ಕೆಎಆರ್ ಬಿಎನ್ ಎನ್‌ಸಿಸಿ ಘಟಕದ ಕೆಡೆಟ್ ಆಗಿರುವ ಸೃಷ್ಠಿ ಅವರು ಶಿಖರದ ತುದಿಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸುವ ಮೂಲಕ ದೇಶಭಕ್ತಿ, ಧೈರ್ಯ ಹಾಗೂ ಸಾಹಸ ಮನೋಭಾವವನ್ನು ಅನಾವರಣಗೊಳಿಸಿದ್ದಾರೆ. ಈ ಸಾಧನೆಯ ಮೂಲಕ ಅವರು ತಮ್ಮ ಕಾಲೇಜು, ಕೆ.ಎಲ್.ಇ. ಸಂಸ್ಥೆ, ಗದಗ ಜಿಲ್ಲೆ ಹಾಗೂ ಜಕ್ಕಲಿ ಗ್ರಾಮಕ್ಕೆ ವಿಶೇಷ ಕೀರ್ತಿ ತಂದಿದ್ದಾರೆ.

ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ ಎನ್‌ಸಿಸಿ ಕೆಡೆಟ್‌ಗಳೊಂದಿಗೆ ನಡೆದ ಈ ಶಿಬಿರದಲ್ಲಿ ಪರ್ವತಾರೋಹಣ, ಟ್ರೆಕ್ಕಿಂಗ್, ಸಾಹಸ ಕ್ರೀಡೆಗಳು, ಪ್ರತಿಕೂಲ ಪರಿಸ್ಥಿತಿಯಲ್ಲಿ ಬದುಕುವ ಕೌಶಲಗಳು, ನಾಯಕತ್ವ ಗುಣಗಳ ವಿಕಾಸ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಗೆ ಸಂಬಂಧಿಸಿದ ತರಬೇತಿಗಳನ್ನು ನೀಡಲಾಯಿತು. ಈ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ ಸೃಷ್ಠಿ ಅವರು ತಮ್ಮ ಸಾಮರ್ಥ್ಯ, ಆತ್ಮವಿಶ್ವಾಸ ಮತ್ತು ಶಿಸ್ತುಬದ್ಧತೆಯನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪರ್ವತಾರೋಹಣವು ದೈಹಿಕ ಸಾಮರ್ಥ್ಯದನ ಜೊತೆಗೆ ಮಾನಸಿಕ ದೃಢತೆ, ತಾಳ್ಮೆ, ಧೈರ್ಯ ಹಾಗೂ ನಿರಂತರ ಪರಿಶ್ರಮವನ್ನು ಬೇಡುವ ಸವಾಲಿನ ಕ್ಷೇತ್ರವಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಶಿಖರವನ್ನು ಯಶಸ್ವಿಯಾಗಿ ಏರಿ ತ್ರಿವರ್ಣ ಧ್ವಜ ಹಾರಿಸಿರುವ ಸೃಷ್ಠಿ ಅವರ ಸಾಧನೆ ಯುವಜನತೆಗೆ ಪ್ರೇರಣೆಯಾಗಿದೆ ಎಂದು ಶಿಕ್ಷಕರು, ಎನ್‌ಸಿಸಿ ಅಧಿಕಾರಿಗಳು ಹಾಗೂ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.

ಸೃಷ್ಠಿ ಅವರು ಜಕ್ಕಲಿ ಗ್ರಾಮದ ಉಮೇಶ್ ಮೇಟಿ ಹಾಗೂ ಕುಟುಂಬದವರ ಪ್ರೋತ್ಸಾಹದಿಂದ ಈ ಸಾಧನೆ ಮಾಡಿದ್ದು, ಅವರ ಯಶಸ್ಸು ಕುಟುಂಬ ಸದಸ್ಯರು, ಗ್ರಾಮಸ್ಥರು ಹಾಗೂ ಶಿಕ್ಷಣ ಕ್ಷೇತ್ರದ ಗಣ್ಯರಲ್ಲಿ ಹರ್ಷವನ್ನುಂಟು ಮಾಡಿದೆ. ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿನಿಯೊಬ್ಬರು ರಾಷ್ಟ್ರೀಯ ಮಟ್ಟದ ಪರ್ವತಾರೋಹಣ ಶಿಬಿರದಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿರುವುದು ಜಕ್ಕಲಿ ಗ್ರಾಮದ ಹೆಮ್ಮೆಯ ಸಂಗತಿಯಾಗಿದೆ.

ಸೃಷ್ಠಿ ಅವರ ಈ ಅಪೂರ್ವ ಸಾಧನೆಗೆ ಜೆ.ಟಿ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎನ್‌ಸಿಸಿ ಅಧಿಕಾರಿಗಳು, ಉಪನ್ಯಾಸಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಶಿಖರಗಳನ್ನು ಏರಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದ್ದಾರೆ.

You may also like

Leave a Comment

ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು   ಅಬ್ಬಿಗೇರಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತಿನ ಕರಿ ಮುರಿತ – ಬಿಳಿ ಬೆಳೆಗೆ ಶುಭ ಸಂಕೇತ   ಕರಿ ಹರಿದ ಬಿಳಿ ಎತ್ತು: ಊರಿಗೇ ಒಲಿದ ಅದೃಷ್ಟ, ಈ ಬಾರಿ ಬಂಪರ್ ಬೆಳೆ ನಿಶ್ಚಿತ!   ಜೀವನದಲ್ಲಿ ಗುರಿಯಿರಲಿ ಉರಿ ಬೇಡ : ಶ್ರೀ ರಂಭಾಪುರಿ ಜಗದ್ಗುರುಗಳು   ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ