ಚೈತನ್ಯ ನ್ಯೂಸ್ 24 ಯಡ್ರಾಮಿ ಮೇ.22:
ಭಗವಂತನ ಸೃಷ್ಟಿಯಲ್ಲಿ ಎಲ್ಲರೂ ಬದುಕಿ ಬಾಳುವ ಅವಕಾಶ ಕೊಟ್ಟಿರುವನು. ಸಾಧನೆಯಿಂದ ಶ್ರೇಯಸ್ಸನ್ನು ಕಾಣಲು ಸಾಧ್ಯ. ಶ್ರಮ ಸಂಸ್ಕೃತಿಯಿ0ದ ಬದುಕು ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶನಿವಾರ ತಾಲೂಕಿನ ಬೆಣ್ಣೂರು ಗ್ರಾಮದ ಶ್ರೀಮದ್ ರಂಭಾಪುರಿ ಶಾಖಾ ಹಿರೇಮಠದ ನೂತನ ಕಟ್ಟಡದ ಉದ್ಘಾಟನೆ-ಶಿವಲಿಂಗ ಪ್ರತಿಷ್ಠಾಪನೆ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮಾನವ ಜೀವನದಲ್ಲಿ ಧರ್ಮ ಅರ್ಥ ಕಾಮ ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಂಪಾದಿಸದಿದ್ದರೆ ಜೀವನ ವ್ಯರ್ಥವಾಗುತ್ತದೆ. ಮನುಷ್ಯನಿಗೆ ಬೇಕಾಗಿರುವುದು ಸಂಪತ್ತು ಮತ್ತು ತನ್ನ ಬಯಕೆಗಳನ್ನು ಪೂರೈಸಿಕೊಳ್ಳುವುದಷ್ಟನ್ನೇ ಮನುಷ್ಯ ಗುರಿಯಾಗಿಟ್ಟುಕೊಂಡಿದ್ದಾನೆ. ಆದರೆ ಧರ್ಮದಿಂದ ನಡೆದಾಗ ಭಗವಂತನ ದಯೆಯಿಂದ ಉಳಿದವುಗಳೆಲ್ಲವೂ ಕೂಡ ಪ್ರಾಪ್ತವಾಗುತ್ತವೆ. ವಿದ್ಯೆ ಮತ್ತು ಸಂಪತ್ತು ಗಳಿಸುವಾಗ ಬಹಳ ವರ್ಷ ಬದುಕುತ್ತೇವೆ ಎಂಬ ಆಶಾದಾಯಕ ಭಾವನೆ ಇರಬೇಕು. ಆದರೆ ಧರ್ಮಾಚರಣೆ ಮಾಡುವಾಗ ಯಾವ ಘಳಿಗೆಯಲ್ಲಿ ಮೃತ್ಯು ದೇವತೆ ನಮ್ಮೆಲ್ಲರನ್ನು ಎಳೆದು ಒಯ್ಯುತ್ತಾಳೆ ಎಂಬ ಭಯಭೀತಿಯನ್ನು ಇಟ್ಟುಕೊಂಡು ಧರ್ಮ ಪರಿಪಾಲನೆ ಮಾಡಿಕೊಂಡು ಬರಬೇಕಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ದರ್ಶನದ ಆದರ್ಶ ಚಿಂತನೆಗಳನ್ನು ಬೋಧಿಸಿದ್ದಾರೆ. ಅವುಗಳನ್ನು ಅರಿತು ಆಚರಿಸಿ ಬಾಳಿದಾಗ ಜೀವನ ಸಾರ್ಥಕಗೊಳ್ಳುತ್ತದೆ. ಪ್ರವಚನ ಪ್ರವೀಣ ಶಿವಲಿಂಗಯ್ಯ ಶಾಸ್ತಿçಗಳವರು ಹಳ್ಳಿ ಹಳ್ಳಿಗೆ ಸಂಚರಿಸಿ ಭಕ್ತರಲ್ಲಿ ಜಾಗೃತಿ ಮೂಡಿಸಿ ಧರ್ಮ ಸಂಸ್ಕೃತಿಗಳನ್ನು ಪ್ರಸಾರಪಡಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಭಕ್ತರು ಭಕ್ತಿಯಿಂದ ಕೊಟ್ಟ ದಾನ ಧರ್ಮಗಳನ್ನು ಮಠದ ಅಭಿವೃದ್ಧಿಗಾಗಿ ಮತ್ತು ಭಕ್ತರ ಒಳಿತಿಗಾಗಿ ವಿನಿಯೋಗಿಸಿರುವುದು ಅವರಲ್ಲಿರುವಂಥ ಧರ್ಮ ನಿಷ್ಠೆಯನ್ನು ಕಾಣಬಹುದು. ಶ್ರೀ ಮಠ ಅಭಿವೃದ್ಧಿಯಾಗಿ ಭಕ್ತರಿಗೆ ಮಾರ್ಗದರ್ಶನ ನೀಡಲೆಂದರು.

ಆಲೂರು ಹಿರೇಮಠದ ಕೆಂಚವೃಷಭೇAದ್ರ ಶಿವಾಚಾರ್ಯ ಸ್ವಾಮಿಗಳು ಮತ್ತು ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯ ಸ್ವಾಮಿಗಳು ಇನ್ನುಳಿದ ಮಠಾಧೀಶರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.
ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್, ಶಿವಶರಣಪ್ಪ ಸಿರಿ, ಹಿರೇಮಠದ ಸಿದ್ದರಾಮಯ್ಯ ಸ್ವಾಮಿ, ಚಂದ್ರಶೇಖರ ಪುರಾಣಿಕ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಶಿವಲಿಂಗಯ್ಯ ಶಾಸ್ತ್ರಿಗಳು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭಕ್ಕೂ ಮುನ್ನ ಸಾರೋಟ ಭವ್ಯ ಮೆರವಣಿಗೆ ಜರುಗಿತು. ಕುಂಭ ಹೊತ್ತ ಮಹಿಳೆಯರು ಆರತಿ ಹಿಡಿದ ಸುಮಂಗಲೆಯರು ವೀರಗಾಸೆ ಪುರವಂತರರು ಮತ್ತು ಭಜನಾ ಮಂಡಳಿಯವರು ಪಾಲ್ಗೊಂಡು ಮೆರವಣಿಗೆಗೆ ಮೆರಗು ತಂದರು.