81
ಚೈತನ್ಯ ನ್ಯೂಸ್ 24 ಬಾಳೆಹೊನ್ನೂರು. ಸಪ್ಟಂಬರ್-೭:
ವ್ಯಕ್ತಿಯ ಬದುಕಿನಲ್ಲಿ ಮುಂದೆ ಗುರಿ ಇರಬೇಕು. ಹಿಂದೆ ಒಬ್ಬ ಸಮರ್ಥ ಗುರುವಿನ ಮಾರ್ಗದರ್ಶನ ಇರಬೇಕು. ಆಸೆ ಕಳೆದುಕೊಂಡು ಮನುಷ್ಯ ಬದುಕಬಹುದು. ಆದರೆ ಆಸಕ್ತಿ ಕಳೆದುಕೊಂಡರೆ ಬಾಳುವುದು ತುಂಬಾ ಕಷ್ಟವೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶ್ರಾವಣ ಕೊನೆಯ ಸೋಮವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಪುರಾಣ ಪ್ರವಚನ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಮನುಷ್ಯನಾಗಿ ಹುಟ್ಟಿದ ಮೇಲೆ ಹೊಗಳಿಕೆ ತೆಗಳಿಕೆ ಮಾನ ಅಪಮಾನ ಲಾಭ ನಷ್ಟ ಸೋಲು ಗೆಲುವು ಬರುವುದು ಸಹಜ. ಅವುಗಳಿಗೆ ಅಂಜದೇ ಬದುಕಿ ತೋರಿಸುವುದೇ ನಿಜವಾದ ಜೀವನ. ನಾವು ಎತ್ತರಕ್ಕೆ ಬೆಳೆದಷ್ಟು ಸ್ನೇಹಜೀವಿ ಆಗಬೇಕೆ ಹೊರತು ಅಹಂಕಾರಿ ಆಗಬಾರದು. ಯಾಕೆಂದರೆ ಸ್ನೇಹ ಸಂಬAಧಗಳನ್ನು ಬೆಸೆಯುತ್ತದೆ. ಅಹಂಕಾರ ನಮ್ಮ ಬದುಕನ್ನು ಸುಡುತ್ತದೆ. ಅವಶ್ಯಕತೆ ಇದ್ದರೂ ಇಲ್ಲದಿದ್ದರೂ ಒಂದೇ ರೀತಿ ಇರುವುದು ಒಳ್ಳೆಯದು. ಮನುಷ್ಯನಲ್ಲಿ ಬರುವ ಪ್ರತಿ ಆಲೋಚನೆಗಳು ಒಬ್ಬರಿಗೆ ಬೆಳಕು ಕೊಡುವ ತರ ಇರಬೇಕೇ ಹೊರತು ಕತ್ತಲ ಕೋಣೆಗೆ ತಳ್ಳುವ ತರ ಇರಬಾರದು. ವೀರಶೈವ ಧರ್ಮ ಸಂಹಿತೆಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ಮೌಲ್ಯಗಳನ್ನು ಬೋಧಿಸಿ ಸಕಲ ಜೀವಾತ್ಮರ ಬಾಳ ಬದುಕಿಗೆ ಬೆಳಕಿನ ಮಾರ್ಗ ತೋರಿಸಿದ್ದಾರೆ ಎಂದರು.

ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನದಲ್ಲಿ ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಮನುಷ್ಯ ಕೆಟ್ಟವರ ಸ್ನೇಹ ಮಾಡದೇ ಉತ್ತಮರ ಸಹವಾಸದಲ್ಲಿ ಬೆಳೆಯುವುದು ಶ್ರೇಯಸ್ಕರ. ಒಂದು ಗುರಿ ಮುಟ್ಟಿದ ತಕ್ಷಣ ಹೊಸ ಗುರಿಗಳನ್ನು ಇಟ್ಟುಕೊಳ್ಳಬೇಕು. ರೂಪ ಚಿಪ್ಪಿನಂತೆ ಇದ್ದರೂ ಪರವಾಗಿಲ್ಲ. ವ್ಯಕ್ತಿತ್ವ ಚಿಪ್ಪಿನೊಳಗಿನ ಮುತ್ತಿನಂತೆ ಇರಬೇಕು. ಯಶಸ್ಸು ಎಂದರೆ ದಿನ ನಿತ್ಯ ಪುನರಾವರ್ತಿಸುವ ಸಣ್ಣ ಸಣ್ಣ ಪ್ರಯತ್ನಗಳ ಮೊತ್ತ. ಸಕಲ ಜೀವ ಜಂತುಗಳಿಗೆ ಒಳಿತನ್ನು ಬಯಸಿದ ಮಹಾತ್ಮರ ಜೀವನ ಬಾಳುವ ಜನಾಂಗಕ್ಕೆ ದಾರಿದೀಪ. ಶ್ರೀ ಜಗದ್ಗುರು ರೇಣುಕಾಚಾರ್ಯರ ಕ್ರಿಯ ಕರ್ತೃತ್ವ ಶಕ್ತಿ ಅಮೋಘವೆಂದರು.
ಭಗವತಿಪುರ ಕಲೆ ಮತ್ತು ಸಾಹಿತ್ಯ ಅಧ್ಯಯನ ಕೇಂದ್ರದ ವಿದುಷಿ ನಯನ ಶ್ರೀಪ್ರಸಾದ ಮತ್ತು ಅವರ ಶಿಷ್ಯ ವೃಂದದವರಿAದ “ಶ್ರಾವಣ ನೃತ್ಯಾರ್ಪಣ” ನಯನ ಮನೋಹರ ಕಾರ್ಯಕ್ರಮ ಜರುಗಿತು.
ಅಂಬಾಜೋಗಾಯಿ ಶಂಭುಲಿAಗ ಶಿವಾಚಾರ್ಯರು, ಹುಡುಗಿ ಹಿರೇಮಠದ ಸೋಮೇಶ್ವರ ಶಿವಾಚಾರ್ಯರು ಮತ್ತು ಕರ್ಜಿಗಿ ಶಂಭು ಸೋಮನಾಥ ಶಿವಾಚಾರ್ಯರು ಉಪಸ್ಥಿತರಿದ್ದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು. ಬ್ಯಾಡಗಿ ರವೀಂದ್ರ-ಸುನAದಾ ದಂಪತಿಗಳಿAದ ದಾಸೋಹ ಸೇವೆ ಜರುಗಿತು.
ಬೆಳಿಗ್ಗೆ ಶ್ರೀ ರಂಭಾಪುರಿ ಜಗದ್ಗುರುಗಳು ಶ್ರಾವಣ ಇಷ್ಟಲಿಂಗ ಮಹಾಪೂಜಾ ನೆರವೇರಿಸಿ ಭಕ್ತರಿಗೆ ಶುಭ ಹಾರೈಸಿದರು. ಶ್ರೀ ಪೀಠದ ಎಲ್ಲ ದೈವಗಳಿಗೆ ಶ್ರಾವಣ ಕೊನೆ ಸೋಮವಾರ ವಿಶೇಷ ಪೂಜೆ ಪುಷ್ಪಾಲಂಕಾರ ನಡೆಯಿತು.