Home ಜಿಲ್ಲಾ ಸುದ್ದಿಗಳುಶರಣರ ಲಿಂಗ ಸಮಾನತೆ, ಪುಲೆ ದಂಪತಿಯ ಸ್ತ್ರೀ ಶಿಕ್ಷಣ ಚಳುವಳಿ ಒಂದೇ ಧ್ಯೇಯದ ಪಥ: ಡಾ. ಕಸ್ತೂರಿ ದಳವಾಯಿ

ಶರಣರ ಲಿಂಗ ಸಮಾನತೆ, ಪುಲೆ ದಂಪತಿಯ ಸ್ತ್ರೀ ಶಿಕ್ಷಣ ಚಳುವಳಿ ಒಂದೇ ಧ್ಯೇಯದ ಪಥ: ಡಾ. ಕಸ್ತೂರಿ ದಳವಾಯಿ

by Editor
0 comments

ಚೈತನ್ಯ ನ್ಯೂಸ್‌ ೨೪ ನರೇಗಲ್ಲ ಜೂ.2:

 

ಗದಗ ಅಕ್ಷರ ಭಾರತ ಪ್ರತಿಷ್ಠಾನ, ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಹಾಗೂ ನರೇಗಲ್ಲ ಶ್ರೀ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ, ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಶ್ರೀ ಅನ್ನದಾನೇಶ್ವರ ಶಿವಾನುಭವ ಮಂಟಪದಲ್ಲಿ 73ನೇ ಶಿವಾನುಭವ ಗೋಷ್ಠಿ ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ಡಾ. ಕಸ್ತೂರಿ ದಳವಾಯಿ, ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ಗದಗ ಅವರು ಮಾತನಾಡಿ, ಹನ್ನೆರಡನೇ ಶತಮಾನದ ಶಿವಶರಣರು ಪ್ರತಿಪಾದಿಸಿದ ಲಿಂಗ ಸಮಾನತೆ ಮತ್ತು ಸಮಾಜ ಸುಧಾರಕರಾದ ಮಹಾತ್ಮ ಜ್ಯೋತಿಬಾ ಪುಲೆ ಹಾಗೂ ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಪುಲೆ ಅವರು ಪ್ರತಿಪಾದಿಸಿದ ಸ್ತ್ರೀ ಸಮಾಜದ ಪರಿಕಲ್ಪನೆಗಳ ನಡುವೆ ಸಾಕಷ್ಟು ಸಾಮ್ಯತೆಗಳಿವೆ ಎಂದು ಅಭಿಪ್ರಾಯಪಟ್ಟರು.
ಶಿವಶರಣರು ತಮ್ಮ ವಚನಗಳ ಮೂಲಕ ಮಹಿಳೆಯರಿಗೂ ಸಮಾನ ಅವಕಾಶ ಮತ್ತು ಗೌರವ ದೊರಕಬೇಕು ಎಂಬ ಸಂದೇಶ ಸಾರಿದ್ದರು. ಅದೇ ಚಿಂತನೆಯ ಮುಂದುವರಿದ ರೂಪವಾಗಿ ಜ್ಯೋತಿಬಾ ಪುಲೆ ಮತ್ತು ಸಾವಿತ್ರಿಬಾಯಿ ಪುಲೆ ಅವರು ಸ್ತ್ರೀ ಶಿಕ್ಷಣದ ಚಳುವಳಿಯನ್ನು ರೂಪಿಸಿ ಮಹಿಳೆಯರ ಬದುಕಿನಲ್ಲಿ ಹೊಸ ಬೆಳಕನ್ನು ಮೂಡಿಸಿದರು ಎಂದು ತಿಳಿಸಿದರು.
ಅಂದು ಸಮಾಜದ ವಿರೋಧ, ಅಪಮಾನ ಮತ್ತು ಅನೇಕ ಸವಾಲುಗಳ ನಡುವೆಯೂ ಪುಲೆ ದಂಪತಿ ಆರಂಭಿಸಿದ ಸ್ತ್ರೀ ಶಿಕ್ಷಣದ ಹೋರಾಟ ಇಂದು ಸಾರ್ಥಕತೆಯನ್ನು ಕಂಡಿದೆ. ಮಹಿಳೆಯರು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಆಡಳಿತ, ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಪುರುಷರಿಗೆ ಸರಿಸಮಾನವಾಗಿ ಸಾಧನೆ ಮಾಡುತ್ತಿರುವುದು ಅವರು ಬೆಳಗಿಸಿದ ಜ್ಞಾನ ದೀಪದ ಫಲವಾಗಿದೆ ಎಂದು ಹೇಳಿದರು.
ಗೋಷ್ಠಿಯ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಹಾಗೂ ಕೆವಿಬಿಎಮ್ ಉಚಿತ ಪ್ರಸಾದ ನಿಲಯದ ಮೇಲ್ವಿಚಾರಕ ಸಿ.ಐ. ಮರಡಿಮಠ ವಹಿಸಿದ್ದರು. ಹಿರಿಯ ಶಿಕ್ಷಕರಾದ ಜೆ. ಬಿ. ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಪಾಪಣ್ಣವರ ಪರಿಚಯಿಸಿದರು. ಮುಖ್ಯ ಶಿಕ್ಷಕ ಎಸ್.ಎನ್. ಹೂಲಗೇರಿ ಸ್ವಾಗತಿಸಿದರು. ಡಾ. ಕಲ್ಲಯ್ಯ ಹಿರೇಮಠ ನಿರೂಪಿಸಿದರು. ಹಾದಿಮನಿಯವರು ವಂದಿಸಿದರು.
ಕೆ.ವಿ.ಬಿ.ಎಮ್. ಉಚಿತ ಪ್ರಸಾದ ನಿಲಯದ ವಿದ್ಯಾರ್ಥಿಗಳು, ಹೇಮರೆಡ್ಡಿ ಮಲ್ಲಮ್ಮ ಹಾಗೂ ಅಕ್ಕಮಹಾದೇವಿ ಮಹಿಳಾ ವಸತಿ ನಿಲಯದ ವಿದ್ಯಾರ್ಥಿನಿಯರು, ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

You may also like

Leave a Comment

ಸದ್ಗುಣ ಸಚ್ಚಾರಿತ್ರ್ಯದಿಂದ ಬದುಕು ಸಮೃದ್ಧ : ಶ್ರೀ ರಂಭಾಪುರಿ ಜಗದ್ಗುರುಗಳು   ಅಬ್ಬಿಗೇರಿಯಲ್ಲಿ ಕಾರ ಹುಣ್ಣಿಮೆ ಸಂಭ್ರಮ: ಬಿಳಿ ಎತ್ತಿನ ಕರಿ ಮುರಿತ – ಬಿಳಿ ಬೆಳೆಗೆ ಶುಭ ಸಂಕೇತ   ಕರಿ ಹರಿದ ಬಿಳಿ ಎತ್ತು: ಊರಿಗೇ ಒಲಿದ ಅದೃಷ್ಟ, ಈ ಬಾರಿ ಬಂಪರ್ ಬೆಳೆ ನಿಶ್ಚಿತ!   ಜೀವನದಲ್ಲಿ ಗುರಿಯಿರಲಿ ಉರಿ ಬೇಡ : ಶ್ರೀ ರಂಭಾಪುರಿ ಜಗದ್ಗುರುಗಳು   ಶ್ರೀ ರಂಭಾಪುರಿ ಜಗದ್ಗುರುಗಳವರ ಜುಲೈ ಮಾಹೆಯ ಪ್ರವಾಸ