ನರೇಗಲ್ಲ೧೧-ನೂರು ವರ್ಷಕ್ಕೂ ಹೆಚ್ಚಿನ ವರ್ಷಗಳಷ್ಟು ಇತಿಹಾಸ ಹೊಂದಿದ, ಎರಡನೆ ಗಾಣಗಾಪುರವೆಂದೇ ಭಕ್ತರಿಂದ ಕರೆಯಿಸಿಕೊಳ್ಳುತ್ತಿರುವ ನರೇಗಲ್ಲದ ಶ್ರೀ ದತ್ತಾತ್ರೇಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಇಂದು ಸೋಮವಾರ ಬ್ರಹ್ಮ ಸಮಾಜದ ಹಿರಿಯರಾದ ಡಾ. ಜಿ. ಕೆ. ಕಾಳೆಯವರು ಭೂಮಿಪೂಜೆ ನೆರವೇರಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನರೇಗಲ್ಲ ಪಟ್ಟಣದಲ್ಲಿ ನೆಲೆ ನಿಂತಿರುವ ಶ್ರೀ ಗುರು ದತ್ತಾತ್ರೇಯ ಭಕ್ತರ ಕಾಮನೆಗಳನ್ನು ನೆರವೇರಿಸುವ ಭಕ್ತ ವತ್ಸಲನಾಗಿದ್ದಾನೆ. ಅವನನ್ನು ನಂಬಿ ಕೈಗೊಳ್ಳುವ ಯಾವುದೇ ಕಾರ್ಯವೂ ಸಂಪೂರ್ಣವಾಗಿ ಯಶಸ್ವಿಯಾಗುವುದನ್ನು ನಾವುಗಳು ಹಲವಾರು ಬಾರಿ ಕಂಡಿದ್ದೇವೆ. ಈಗ್ಗೆ ನಾಲ್ಕು ದಶಕಗಳ ಹಿಂದೆ ಶ್ರೀ ದತ್ತಾತ್ರೇಯ ದೇವಸ್ಥಾನವನ್ನು ಭಕ್ತರೆಲ್ಲರ ಸಹಕಾರದಿಂದ ನೂತನವಾಗಿ ನಿರ್ಮಿಸಲಾಗಿತ್ತು. ಆದರೆ ಈಗ ಮೇಲ್ಮಹಡಿಯು ಶಿಥಿಲಾವಸ್ಥೆಯನ್ನು ತಲುಪಿರುವದರಿಂದ ಅದನ್ನು ಜೀರ್ಣೋದ್ಧಾರ ಮಾಡಲೇಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಇಂದು ಭೂಮಿ ಪೂಜೆಯನ್ನು ನೆರವೇರಿಸಿದ್ದೇವೆ. ಇದರೊಂದಿಗೆ ಶ್ರೀ ದತ್ತಾತ್ರೇಯ ಕಲ್ಯಾಣ ಮಂಟಪವನ್ನೂ ನಿರ್ಮಿಸುವ ಯೋಜನೆ ಇದೆ. ಇದಕ್ಕಾಗಿ ಅಂದಾಜು ಒಂದೂವರೆ ಕೋಟಿ ರೂಪಾಯಿಗಳ ವೆಚ್ಚ ತಗುಲಲಿದ್ದು, ಈ ಕಾರ್ಯಕ್ಕೆ ಶ್ರೀ ದತ್ತನ ಭಕ್ತರು ಉದಾರ ಮನಸ್ಸಿನ ಸಹಾಯ-ಸಹಕಾರ ನೀಡಬೇಕೆಂದು ತಿಳಿಸಿದರು.
ಶ್ರೀ ದತ್ತ ಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಮಾತನಾಡಿ ಶ್ರೀ ಗುರು ದತ್ತಾತ್ರೇಯನ ಜೋಳಿಗೆಗೆ ಎಂದಿಗೂ ಬರವಿಲ್ಲ ಎಂಬುದು ನಮಗೆ ಅನುಭವವೇದ್ಯವಾಗಿದೆ. ನಮ್ಮಲ್ಲಿನ ಸೀಮಿತ ಆದಾಯದೊಂದಿಗೆ ಶ್ರೀ ಗುರು ದತ್ತಾತ್ರೇಯನ ಆಶೀರ್ವಾದ ಪಡೆದು ಈ ಮಹತ್ಕಾರ್ಯಕ್ಕೆ ಮುನ್ನಡಿ ಇಟ್ಟಿದ್ದೇವೆ. ಶ್ರೀ ಗುರು ದತ್ತಾತ್ರೇಯನ ಭಕ್ತರು ಎಲ್ಲೆಲ್ಲಿ ಇರುವರೋ ಅವರೆಲ್ಲರೂ ಉದಾರ ಮನದ ಸಹಾಯ ನೀಡುವರೆಂಬ ಭರವಸೆ ಇದೆ. ಆದ್ದರಿಂದ ಭಕ್ತರು ಈ ಜೀರ್ಣೋದ್ಧಾರ ಕಾರ್ಯದ ಬಗ್ಗೆ ಏನೇ ಮಾಹಿತಿ ಬೇಕಾದರೂ ಶ್ರೀ ದತ್ತಭಕ್ತ ಮಂಡಳಿಯ ಅಧ್ಯಕ್ಷರಾದ ಡಾ. ನಾಗರಾಜ ಗ್ರಾಮಪುರೋಹಿತ(೮೮೮೪೩೫೩೧೭೩), ಉಪಾಧ್ಯಕ್ಷ ಆದರ್ಶ ಕುಲಕರ್ಣಿ(೯೬೬೩೨೭೨೫೭೫) ಮತ್ತು ಕಾರ್ಯದರ್ಶಿ ರಘುನಾಥ ಕೊಂಡಿ(೬೩೬೪೧೪೧೭೧೬) ಅವರನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದೆಂದರು.
ಶ್ರೀ ದತ್ತಾತ್ರೇಯ ದೇವಸ್ಥಾನದ ಅರ್ಚಕರಾದ ಶ್ರೀವಲ್ಲಭಭಟ್ಟ ಸದರಜೋಷಿ, ಆದರ್ಶ ಕುಲಕರ್ಣಿ ಭೂಮಿಪೂಜಾ ಕಾರ್ಯಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಎ. ಜಿ. ಕುಲಕರ್ಣಿ, ಕಾರ್ಯದರ್ಶಿ ರಘುನಾಥ ಕೊಂಡಿ, ಅರುಣ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ, ಶ್ರೀ ದತ್ತ ಭಕ್ತ ಮಂಡಳಿಯ ಸದಸ್ಯರು, ಸುಮಂಗಲೆಯರು ಉಪಸ್ಥಿತರಿದ್ದರು.
ಶ್ರೀ ದತ್ತಾತ್ರೇಯ ದೇವಸ್ಥಾನ ಜೀರ್ಣೋದ್ಧಾರಕ್ಕೆ ಡಾ. ಜಿ. ಕೆ ಕಾಳೆ ಚಾಲನೆ
237
previous post